ಮುಂಬೈ:ಮರಾಠಿಗರ ರಾಜ್ಯ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡು ವಾರಗಳೇ ಕಳೆದಿವೆ. ಇದರ ಜೊತೆಯಲ್ಲೇ ಸರ್ಕಾರ ರಚನೆಯ ನಾನಾ ಕಸರತ್ತು ನಡೆಯುತ್ತಲೇ ಇದ್ದು, ಸದ್ಯ ಇದು ಮತ್ತಷ್ಟು ಚುರುಕುಗೊಂಡಿದೆ.
ಶೀಘ್ರದಲ್ಲೇ ಶಿವಸೇನೆ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಬುಧವಾರ ಸಂಸದ ಸಂಜಯ್ ರಾವುತ್ ಹೇಳಿಕೆ ನೀಡಿದ್ದರು. ಇತ್ತ ಕಾಂಗ್ರೆಸ್ ಇದೇ ವಿಚಾರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡುವ ಬಗ್ಗೆ ಎಲ್ಲ ರೀತಿಯ ಮಾತುಕತೆಗಳು ಮುಕ್ತಾಯವಾಗಿದ್ದು, ನಮ್ಮ ನಿರ್ಧಾರವನ್ನು ಶುಕ್ರವಾರ ಪ್ರಕಟಿಸುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಿರಿಯ 'ಕೈ' ನಾಯಕ ಪೃಥ್ವಿರಾಜ್ ಚೌಹಾಣ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್ ಪಕ್ಷ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆ ದೆಹಲಿಯ ನಿವಾಸದಲ್ಲಿ ಸಭೆ ನಡೆಸಿತ್ತು. ಈ ವೇಳೆ ಶಿವಸೇನೆಗೆ ಬೆಂಬಲ ಹಾಗೂ ಅಧಿಕಾರ ಹಂಚಿಕೆಯ ಬಗ್ಗೆ ಎಲ್ಲವೂ ಅಂತಿಮವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಅದರೆ, ಶಿವಸೇನೆ ಜೊತೆ ಶುಕ್ರವಾರ ನಾವು ಸಭೆ ಸೇರಿ ನಂತರದಲ್ಲಿ ನಿರ್ಧಾರ ಪ್ರಕಟಿಸುತ್ತೇವೆ ಎಂದು ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ.
ಎಲ್ಲವೂ ಅಂದಕೊಂಡತೆ ಅದಲ್ಲಿ ಶುಕ್ರವಾರ ಸಂಜೆ ಅರ್ಥಾತ್ ನಾಳೆ ಸಂಜೆ ವೇಳೆಗೆ ಮಹಾರಾಷ್ಟ್ರ ಸರ್ಕಾರ ರಚನೆಯ ಸಂಪೂರ್ಣ ಚಿತ್ರಣ ದೊರೆಯಲಿದೆ. ನಾಳೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.