ನವದೆಹಲಿ: ಲಡಾಖ್ನಲ್ಲಿ ಗಡಿ ಸಮಸ್ಯೆ ಉದ್ಭವವಾದಾಗಿನಿಂದ ಚೀನಾ ಹಾಗೂ ಪಾಕಿಸ್ತಾನ ಸೇನೆಗಳು ಭಾರತದ ಗಡಿಯಲ್ಲಿ ಉದ್ಧಟತನ ಮೆರೆಯುತ್ತಿವೆ. ಈ ಹಿನ್ನೆಲೆ ನಮ್ಮ ದೇಶದ ಸೇನೆ ಸಹ ತನ್ನ ಯುದ್ಧ ವಿಮಾನಗಳನ್ನು ಹಾರಾಟ ನಡೆಸಿ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.
ಇತ್ತೀಚೆಗಷ್ಟೇ ಸೇನೆಯ ಅಪಾಚೆ ಹೆಲಿಕಾಪ್ಟರ್ ಸಹ ಗಡಿ ಭಾಗದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿತ್ತು. ಇದೀಗ ಪಶ್ಚಿಮ ಲಡಾಖ್ ಭಾಗದ ಪಾಕಿಸ್ತಾನ ಗಡಿಯಲ್ಲಿ ಸ್ವದೇಶಿ ಯುದ್ಧ ವಿಮಾನ ಕಾರ್ಯಕ್ರಮದಡಿ ಸ್ಥಳೀಯವಾಗಿ ನಿರ್ಮಿಸಲಾದ ತೇಜಸ್ ಯುದ್ಧ ವಿಮಾನವನ್ನು ನಿಯೋಜನೆ ಮಾಡಿದೆ.
ದೇಶದ ಪೂರ್ವಭಾಗದಲ್ಲಿ ಚೀನಾ ಕ್ಯಾತೆ ತೆಗೆದಾಗಿನಿಂದ ಯಾವುದೇ ಅಪಾಯ ಒದಗಿ ಬರಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ ದೇಶದ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನದ ಕುತಂತ್ರದ ಮೇಲೆ ಹದ್ದಿನ ಕಣ್ಣಿಡಲು ತೇಜಸ್ ಯುದ್ಧ ವಿಮಾನವನ್ನು ಗಡಿಯಲ್ಲಿ ನಿಯೋಜಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ತೇಜಸ್ ವಿಮಾನವನ್ನು ಇಲ್ಲಿ ನಿಯೋಜಿಸಲಾಗಿದೆ.