ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ನಡೆದ ಐದು ಏಕದಿನ ಪಂದ್ಯಗಳ ಸರಣಿಯ ಕ್ಲೈಮ್ಯಾಕ್ಸ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಕಾಂಗರೂ ಪಡೆ ಸರಣಿಯನ್ನ 3-2 ಅಂತರದಿಂದ ಕೈವಶ ಮಾಡಿಕೊಂಡಿದೆ.
ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಡೆ 35 ರನ್ಗಳ ಗೆಲುವು ದಾಖಲು ಮಾಡಿ ಐದು ಏಕದಿನ ಪಂದ್ಯಗಳ ಸರಣಿಯನ್ನ 3-2 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖವಾಜ್ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳಿಕೆ ಮಾಡಿತು.
ಸ್ಪರ್ಧಾತ್ಮಕ 273 ರನ್ ಟಾರ್ಗೆಟ್ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಅಘಾತ ಅನುಭವಿಸಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್ (12) ರನ್ ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಬಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ 20 ರನ್ ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ವಿರಾಟ್ ವಿಕೆಟ್ ಪತನವಾಗುತ್ತಿದ್ದಂತೆ ರಿಷಭ್ ಪಂತ್ (16), ವಿಜಯ್ ಶಂಕರ್(16), ರವೀಂದ್ರ ಜಡೇಜಾ(0) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.