ನವದೆಹಲಿ: ರಾಷ್ಟ್ರೀಯ ಹಿತದೃಷ್ಟಿಯಿಂದ ಎಫ್‌ಐಸಿಸಿಐ ಮತ್ತು ಕೈಗಾರಿಕಾ ಸಂಸ್ಥೆಗೆ ಸಂಬಂಧಿಸಿದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ವೆಚ್ಚವನ್ನು ಕೋವಿಡ್ ಪ್ರತಿಕ್ರಿಯೆ ಕಾರ್ಯಪಡೆ ನಿಗದಿಪಡಿಸಿದೆ.
ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಹೆಚ್ಚಿನ ಆಸ್ಪತ್ರೆಗಳ ಅವಶ್ಯಕತೆಯಿರುವ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ಸೋಂಕಿತ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್-19 ಚಿಕಿತ್ಸಾ ವೆಚ್ಚವನ್ನು ಸರ್ಕಾರಿ ಉಲ್ಲೇಖಿತ ರೋಗಿಗಳು, ಸ್ವತಃ ತಾವೇ ಪಾವತಿಸುವ ರೋಗಿಗಳು ಮತ್ತು ತರ್ಡ್ ಪಾರ್ಟಿಯಿಂದ ನಿರ್ವಹಣೆಗೆ (ಟಿಪಿಎ) ಒಳಪಡುವ ವ್ಯಾಪ್ತಿಗೆ ಸಂಬಂಧಿಸಿದಂತೆ ವರ್ಗೀಕರಿಸಲಾಗಿದೆ.
ತೀವ್ರವಾದ ಆರೈಕೆಯ ಅಗತ್ಯವಿಲ್ಲದ ಆದರೆ, ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಬೇಕಾದ ರೋಗಿಗಳು, ವೆಂಟಿಲೇಟರ್ ಇಲ್ಲದೇ ಐಸಿಯು ಅಗತ್ಯವಿರುವ ರೋಗಿಗಳು ಮತ್ತು ವೆಂಟಿಲೇಟರ್‌ನೊಂದಿಗೆ ಐಸಿಯು ಅಗತ್ಯವಿರುವ ರೋಗಿಗಳಂತೆ ಪ್ರಕರಣದ ತೀವ್ರತೆ ಅವಲಂಬಿಸಿ ರೋಗಿಗಳನ್ನು ಮೂರು ಹಂತಗಳಿಗೆ ವರ್ಗೀಕರಿಸಲಾಗಿದೆ.
ಪ್ರತ್ಯೇಕ ವಾರ್ಡ್‌ಗಳಲ್ಲಿ ಸರ್ಕಾರಿ ಉಲ್ಲೇಖಿತ ರೋಗಿಗಳಿಗೆ 13,600 ರೂ., ಐಸಿಯುನಲ್ಲಿ ವೆಂಟಿಲೇಟರ್ ಇಲ್ಲದೇ 27,088 ರೂ. ಮತ್ತು ಐಸಿಯುನಲ್ಲಿ ವೆಂಟಿಲೇಟರ್ ಬೇಕಾದಲ್ಲಿ 36,853 ರೂ.ಗೆ ಚಿಕಿತ್ಸೆ ನೀಡಬೇಕು.
ಖಾಸಗಿ ಆಸ್ಪತ್ರೆಗಳಡಿ ಪ್ರತ್ಯೇಕ ವಾರ್ಡ್‌ಗಳಲ್ಲಿ 17,000 ರೂ., ಐಸಿಯುನಲ್ಲಿ ವೆಂಟಿಲೇಟರ್ ಇಲ್ಲದೇ 34,000 ರೂ. ಮತ್ತು ಐಸಿಯುನಲ್ಲಿ ವೆಂಟಿಲೇಟರ್ ಬೇಕಾದಲ್ಲಿ 45,000 ರೂ.ಗೆ ಚಿಕಿತ್ಸೆ ನೀಡಬೇಕು.
ಟಿಪಿಎ ವ್ಯಾಪ್ತಿಗೆ ಒಳಪಡುವ ರೋಗಿಗಳಿಗೆ, ಪ್ರತ್ಯೇಕ ವಾರ್ಡ್‌ಗಳಲ್ಲಿ 20,000 ರೂ., ಐಸಿಯುನಲ್ಲಿ ವೆಂಟಿಲೇಟರ್ ಇಲ್ಲದೇ 55,000 ರೂ. ಮತ್ತು ಐಸಿಯುನಲ್ಲಿ ವೆಂಟಿಲೇಟರ್ ಬೇಕಾದಲ್ಲಿ 68,000 ರೂ.ಗೆ ಚಿಕಿತ್ಸೆ ನೀಡಬೇಕು ಎಂದು ಸಂಸ್ಥೆ ತಿಳಿಸಿದೆ.