ನವದೆಹಲಿ: ಭಾರತದ ಪ್ರಮುಖ ಕ್ರಿಕೆಟ್ ಮೈದಾನಗಳಲ್ಲಿ ಮುಂಚೂಣಿಯಲ್ಲಿರುವ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಇಂದು ಮರುನಾಮಕರಣ ಮಾಡಲಾಗಿದ್ದು, ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿ. ಅರುಣ್ ಜೇಟ್ಲಿ ಹೆಸರಿಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಅರುಣ್ ಜೇಟ್ಲಿ ಹೆಸರನ್ನು ಈ ಮೈದಾನಕ್ಕಿಡಲು ದೆಹಲಿ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು. ಅದರಂತೆ ಇಂದು ಕಾರ್ಯಕ್ರಮ ನಡೆಯಿತು. ಈ ಹಿಂದೆ ಜೇಟ್ಲಿ ದೆಹಲಿ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಟೀಂ ಇಂಡಿಯಾದ ನಾಯಕ ಹಾಗೂ ದಿಲ್ಲಿ ಮೂಲದ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಗೌರವಾರ್ಥವಾಗಿ ಇದೇ ಕ್ರೀಡಾಂಗಣದಲ್ಲಿನ ಒಂದು ಸ್ಟ್ಯಾಂಡ್ಗೆ ಅವರ ಹೆಸರಿಟ್ಟು ಅನಾವರಣ ಮಾಡಲಾಗಿದೆ.
ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು ಮೈದಾನಕ್ಕೆ ಮರುನಾಮಕರಣ ಮಾಡಿದರು.ಕಾರ್ಯಕ್ರಮದಲ್ಲಿ ಅರುಣ್ ಜೇಟ್ಲಿ ಪತ್ನಿ, ಮಗಳು ಸೇರಿದಂತೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ, ಶಿಖರ್ ಧವನ್,ಮನೀಷ್ ಪಾಂಡೆ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಉಪಸ್ಥಿತರಿದ್ದರು. ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಒಟ್ಟಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.