ವಾಷಿಂಗ್ಟನ್: 2020ರ ಫೆಬ್ರವರಿಯೊಳಗೆ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ನೀವೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಫ್ಎಟಿಎಫ್ ನೇರ ಎಚ್ಚರಿಕೆ ರವಾನೆ ಮಾಡಿದೆ.
ಜಾಗತಿಕ ಭಯೋತ್ಪಾದನಾ ಚಟುವಟಿಕೆ ಮೇಲೆ ನಿಗಾವಹಿಸುವ ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ಮುಂದಿನ ನಾಲ್ಕು ತಿಂಗಳ ಕಾಲ ಪಾಕ್ಗೆ ಕಾಲಾವಕಾಶ ನೀಡಿದ್ದು, ತ್ವರಿತ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
27ರ ಪೈಕಿ 22 ಷರತ್ತು ಈಡೇರಿಸುವಲ್ಲಿ ವಿಫಲ ಈಗಾಗಲೇ ಭಯೋತ್ಪಾದನೆ ಹೋಗಲಾಡಿಸಲು ಎಫ್ಎಟಿಎಫ್ ನೀಡಿದ್ದ 27 ಕಾರ್ಯಸೂಚಿಗಳಲ್ಲಿ ಪಾಕ್ 22 ಷರತ್ತು ಈಡೇರಿಕೆ ಮಾಡುವಲ್ಲಿ ವಿಫಲಗೊಂಡಿದೆ. ಈ ಬೆನ್ನಲ್ಲೆ ಪಾಕ್ಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ವರ್ಷ ಫೆಬ್ರವರಿ 2020ರೊಳಗೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದು, ಒಂದು ವೇಳೆ ಅದರಲ್ಲಿ ವಿಫಲಗೊಂಡರೆ ಪಾಕ್ ಜಾಗತಿಕ ಉಗ್ರಪಟ್ಟಿಗೆ ಸೇರುವುದು ಕನ್ಫರ್ಮ್ ಆಗಿದೆ.
205 ದೇಶಗಳ ಪೈಕಿ ಚೀನಾ,ಟರ್ಕಿ ಹಾಗೂ ಮಲೇಷ್ಯಾ ಎಫ್ಎಟಿಎಫ್ ಸಭೆಯಲ್ಲಿ ಪಾಕ್ಗೆ ಸಪೋರ್ಟ್ ಮಾಡಿದ್ದರಿಂದ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ. ವಿಶೇಷವೆಂದರೆ ಹಣಕಾಸು ಅವ್ಯವಹಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ವಿಫಲವಾಗಿರುವ ಪಾಕ್ ಎಫ್ಎಟಿಎಫ್ ಈಗಾಗಲೇ ಗ್ರೇ ಪಟ್ಟಿಗೆ ಸೇರಿಸಿದೆ.