ತೆಲಂಗಾಣ: ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗಲ್ಲ, ಈ ಮಾತು ಅಕ್ಷರಶಃ ನಿಜ. ತಮ್ಮ ಬಲವಾದ ಇಚ್ಚಾ ಶಕ್ತಿಯಿಂದ ದೈಹಿಕ ಅಂಗವೈಕಲ್ಯವನ್ನು ಮೆಟ್ಟಿ ನಿಂತಿದ್ದಾರೆ ಈ ವ್ಯಕ್ತಿ. ಯಾರ ಸಹಾಯವನ್ನು ಪಡೆಯದೇ ಚಮ್ಮಾರಿಕೆ ನಂಬಿ ಬದುಕುತ್ತಿದ್ದಾರೆ. ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಸುಂದರವಾದ ಬದುಕು ಕಟ್ಟಿಕೊಡಲು, ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೇ ತೆಲಂಗಾಣದ ಖೈರತಾಬಾದ್ ನಿವಾಸಿ ಅಮೀರ್ಪುರ್ ಮಲ್ಲೇಶ್. ಇವರು ಇಂದಿನ ಜನರಿಗೆ ಆದರ್ಶವಾಗಿದ್ದಾರೆ.
ಮಲ್ಲೇಶ್ ಬಾಲ್ಯದಿಂದಲೂ ಶೂಗಳನ್ನು ರಿಪೇರಿ ಮಾಡುತ್ತ ಬಂದಿದ್ದು, ತಮ್ಮ ತಾಯಿಯೊಂದಿಗೆ ಫುಟ್‌ಪಾತ್‌ನಲ್ಲಿ ಕುಳಿತು ಈ ಕಾಯಕ ಮಾಡುತ್ತಿದ್ದರು. ಆರಂಭಿಕ ದಿನಗಳಲ್ಲಿ ಜೀವನ ತುಂಬಾ ಚೆನ್ನಾಗಿತ್ತು. ಆದರೆ, ಮಧುಮೇಹ ಇವರ ಜೀವನವನ್ನು ನುಚ್ಚು ನೂರು ಮಾಡಿತು. ಗ್ಯಾಂಗ್ರಿನ್ನಿಂದಾಗಿ ಅವರ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.
ಮಧುಮೇಹದಿಂದ ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಹಲವಾರು ರೀತಿಯ ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ವೈದ್ಯರು ಅವರ ಎಡಗಾಲನ್ನು ಕತ್ತರಿಸಿದರು. ಮುಂದಿನ 2 ವರ್ಷಗಳಲ್ಲಿ ಅವರ ಬಲಗಾಲಿಗೆ ತೀವ್ರವಾಗಿ ಸೋಂಕು ತಗುಲಿದ ಕಾರಣ, ಅದನ್ನೂ ಕೂಡ ತೆಗೆದು ಹಾಕಬೇಕಲಾಯಿತು. ಆದರೆ ಅವರು ಎಂದಿಗೂ ಎದೆಗುಂದಲಿಲ್ಲ ಹಾಗೂ ತಮ್ಮ ಆತ್ಮ ಸ್ಥೈರ್ಯವನ್ನು ಇಂದಿಗೂ ಕಳೆದುಕೊಂಡಿಲ್ಲ.