ನವದೆಹಲಿ: ಕೃಷಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಮಸೂದೆಗಳನ್ನು ಹಿಂಪಡೆಯುವವರೆಗೂ ಹಿಂದೆ ಸರಿಯುವ ಮಾತೇ ಇಲ್ಲವೆಂದು ಸಂಘಟನೆಗಳು ಪಟ್ಟುಹಿಡಿದಿವೆ.
ಈ ಕುರಿತಂತೆ ಸರ್ಕಾರದ ಜೊತೆ ನಡೆದ ಮತ್ತೊಂದು ಹಂತದ ಮಾತುಕತೆ ವಿಫಲವಾಗಿದೆ. ಕಾನೂನಿನಲ್ಲಿನ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಕುರಿತು ಒಪ್ಪಿಗೆ ಸೂಚಿಸದೆ ಮಸೂದೆಯನ್ನು ಹಿಂಪಡೆಯಬೇಕಾಗಿ ರೈತ ಮುಖಂಡರು ಆಗ್ರಹಿಸಿದ್ದಾರೆ. ಇದಲ್ಲದೆ ಮಾಲಿನ್ಯ ಎಸಗುವ ರೈತರ ವಿರುದ್ಧ ಹಾಕಲಾಗುವ ದಂಡವನ್ನು ತೆಗೆಯುವಂತೆಯೂ ಒತ್ತಾಯಿಸಿದ್ದಾರೆ.
ಗುರುವಾರ ವಿಜ್ಞಾನ ಭವನದಲ್ಲಿ ನಡೆದ 4ನೇ ಸುತ್ತಿನ ಮಾತುಕತೆಯ ಬಳಿಕ ಮಾತನಾಡಿದ ಪಂಜಾಬ್ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮುಖಂಡ ದರ್ಶನ್ ಪಾಲ್, ಎಲ್ಲಾ ರೈತ ಮುಖಂಡರೂ ಸರ್ಕಾರದೊಂದಿಗೆ ಸಭೆ ನಡೆಸಲು ಸಿದ್ಧರಿದ್ದಾರೆ. ಮೊದಲ ಅರ್ಧ ಗಂಟೆಯವರೆಗೂ, ಮಂತ್ರಿ ಕೃಷಿ ಮಸೂದೆಗಳ ಕುರಿತು ವಿವರಿಸಿದರು. ಬಳಿಕ ನಾವು ನಮ್ಮ ಬೇಡಿಕೆ ಹಾಗೂ ಆತಂಕ ಕುರಿತು ತಿಳಿಸಿದ್ದೇವೆ ಎಂದಿದ್ದಾರೆ.