ನವದೆಹಲಿ :ಪ್ರಧಾನಿ ನರೇದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕೃಷಿ ಸಂಬಂಧಿ ಮೂರು ವಿಧೇಯಕಗಳ ವಿರುದ್ಧ ಈಗಾಗಲೇ ಇನ್ನಿಲ್ಲದ ಆಕ್ರೋಶ ಕೇಳಿ ಬರುತ್ತಿದೆ. ಇದರ ಮಧ್ಯೆ ಇಂದು ರಾಜ್ಯಸಭೆಯಲ್ಲಿ ಇವುಗಳಿಗೆ ಅನುಮೋದನೆ ಪಡೆಯಲಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ.
ಲೋಕಸಭೆಯಲ್ಲಿ ಈ ಬಿಲ್ಗಳಿಗೆ ಅನುಮೋದನೆ ಸಿಕ್ಕಿದ್ದು, ಇಂದು ಮೂರು ಕೃಷಿ ವಿಧೇಯಕಗಳು ರಾಜ್ಯಸಭೆಯಲ್ಲಿ ಮಂಡನೆಯಾಗಲಿವೆ. ಜತೆಗೆ ಅದಕ್ಕೆ ಅನುಮೋದನೆ ಪಡೆದುಕೊಳ್ಳಬೇಕು. ಆದರೆ ಇಲ್ಲಿ ಎನ್ಡಿಎ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ಅಗ್ನಿ ಪರೀಕ್ಷೆ ಎದುರಾಗಿದೆ.
ಈ ವಿಧೇಯಕಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ ಈಗಾಗಲೇ ಕೇಂದ್ರ ಸಚಿವ ಸಂಪುಟದಿಂದ ಎನ್ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ. ಇದರ ಜತೆಗೆ ಜನನಾಯಕ ಜನತಾ ಪಾರ್ಟಿ ನಾಯಕ ದುಶ್ಯಂತ್ ಸಿಂಗ್ ಚೌಟಾಲ ಕೂಡ ವಿಧೇಯಕಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಎನ್ಡಿಎ ಪಕ್ಷದಲ್ಲಿ ವಿಧೇಯಕಗಳಿಗೆ ಸಂಬಂಧಿಸಿದಂತೆ ಒಡಕು ಉಂಟಾಗಿರುವ ಕಾರಣ ಆಡಳಿತಾರೂಢ ಬಿಜೆಪಿ ಇದೀಗ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ನ ಕೆಲ ಮುಖಂಡರ ಮನವೊಲಿಕೆ ಮಾಡುವುದು ಅನಿವಾರ್ಯವಾಗಿದೆ.
ಲೋಕಸಭೆಯಲ್ಲಿ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ 2020, ರೈತರ ಬೆಲೆ ಖಾತರಿ ಒಪ್ಪಂದ ಸುಗ್ರೀವಾಜ್ಞೆ 2020 ಹಾಗೂ ಕೃಷಿ ಸೇವಾ ಸುಗ್ರೀವಾಜ್ಞೆ 2020ಗೆ ಅನುಮೋದನೆ ಸಿಕ್ಕಿದೆ.