ಚಂಡೀಗಢ: ಕಳೆದೆರಡು ದಿನಗಳಿಂದ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಸಪ್ನಾ ಚೌಧರಿ. ಏಕಾಏಕಿ ಸುದ್ದಿ ಕೇಂದ್ರಕ್ಕೆ ಬಂದಿದ್ದಳು.
ಸಪ್ನಾಳ ರಾಜಕೀಯ ಪ್ರವೇಶ ಆಗಲಿದೆ ಎನ್ನುವುದು ದೇಶಮಟ್ಟದಲ್ಲಿ ಹರಿದಾಡಲು ಶುರುವಾದಂತೆ ಸ್ವತಃ ಸಪ್ನಾ ಚೌಧರಿ ಆ ಸುದ್ದಿಯನ್ನು ತಳ್ಳಿಹಾಕಿದ್ದಳು. ಕಳೆದ 48 ಗಂಟೆಯಲ್ಲಿ ಸುದ್ದಿಯ ಮುನ್ನೆಲೆಗೆ ಬಂದ ಸಪ್ನಾ ಯಾರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..
ಜೂನ್ 2018:
ಅದು 2018 ಜೂನ್, ಬಿಗ್ಬಾಸ್ ರಿಯಾಲಿಟಿ ಶೋ ನಲ್ಲಿ ಒಂದಷ್ಟು ಹೆಸರು ಗಳಿಸಿದ್ದ ಹರಿಯಾಣದ ರೋಹತಕ್ ಮೂಲದ ಸಪ್ನಾ ಚೌಧರಿ ಎನ್ನುವ ಬೆಡಗಿ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಳು.
ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಆ ಬಳಿಕ ನೇರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮೀಟ್ ಮಾಡಲು ಎಐಸಿಸಿ ಮುಖ್ಯ ಕಚೇರಿಗೆ ಬಂದಿದ್ದಳು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ವಿಚಾರಗಳಿಂದ ಪ್ರಭಾವಿತರಾಗಿ ಸಪ್ನಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗುಲ್ಲೆದ್ದಿತ್ತು.
ರಾಗಾ ಭೇಟಿ ಬಳಿಕ ಮಾತನಾಡಿದ್ದ ಸಪ್ನಾ, ಇದು ಕೇವಲ ಸೌಹಾರ್ದಯುತ ಭೇಟಿ ಅಷ್ಟೇ, ಆದರೆ ತಕ್ಷಣವೇ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಳು.
ಅಷ್ಟಕ್ಕೂ ಸಪ್ನಾ ಚೌಧರಿ ಯಾರು..?
1990 ಸೆಪ್ಟೆಂಬರ್ 25ರಂದು ಮಧ್ಯಮ ವರ್ಗದಲ್ಲಿ ಜನಿಸಿದ ಸಪ್ನಾ ತನ್ನ ಹನ್ನೆರಡನೇ ವಯಸ್ಸಿಗೆ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಆ ಬಳಿಕ ಎಲ್ಲ ಕಷ್ಟವನ್ನು ಹಿಮ್ಮೆಟ್ಟಿ ಸಪ್ನಾ ತನ್ನ ಕನಸಿನ ಬೇಟೆ ಶುರುವಿಟ್ಟುಕೊಳ್ಳುತ್ತಾಳೆ. ನೃತ್ಯದಲ್ಲಿ ಸಾಧಿಸುವತ್ತ ಸಪ್ನಾ ಕಠಿಣ ಶ್ರಮವಹಿಸುತ್ತಾಳೆ.
ನೃತ್ಯಗಾರ್ತಿಯಾಗಿ ಆರಂಭಿಕ ದಿನಗಳಲ್ಲಿ ಸಪ್ನಾ ಬಹುತೇಕ ಎಲ್ಲ ಸಭೆ-ಸಮಾರಂಭಗಳಲ್ಲಿ ತನ್ನ ನೃತ್ಯ ಪ್ರದರ್ಶನ ನೀಡುತ್ತಿದ್ದಳು. ಇದೇ ವಿಚಾರದ ವಿವಾದಕ್ಕೂ ಕಾರಣವಾಗಿತ್ತು. ವೇದಿಕೆಯಲ್ಲಿ ನೃತ್ಯ ಮಾಡುತ್ತಾ ಹರಿಯಾಣದ ಸಂಸ್ಕೃತಿಯನ್ನು ಸಪ್ನಾ ಹಾಳು ಮಾಡಿದ್ದಾಳೆ ಎನ್ನುವ ಆರೋಪ ಆಕೆಯ ಮೇಲೆ ಬಂದಿತ್ತು.