ನವದೆಹಲಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಬೆಂಬಲಿಸಿದ್ದು, ನನಗೂ ಅಂತಹ ಅನುಭವವಾಗಿದೆ ಎಂದಿದ್ದಾರೆ.
"ಚೆನ್ನೈ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಅವರ ಅಹಿತಕರ ಅನುಭವ ಅಸಾಮಾನ್ಯವೇನಲ್ಲ. ನಾನು ಮತ್ತು ಸಾಮಾನ್ಯ ನಾಗರಿಕರು ಇದೇ ರೀತಿಯ ಅವಹೇಳನಗಳನ್ನು ಅನುಭವಿಸಿದ್ದೇವೆ, ಅವರು ದೂರವಾಣಿ ಸಂಭಾಷಣೆ ಮತ್ತು ಮುಖಾಮುಖಿಯಾಗಿ ಮಾತನಾಡುವ ಸಮಯದಲ್ಲಿ ಹಿಂದಿಯಲ್ಲೇ ಮಾತನಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಚಿದಂಬರಂ ಹೇಳಿದರು.
"ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾರತದ ಅಧಿಕೃತ ಭಾಷೆಗಳಾಗಿರಲು ಕೇಂದ್ರವು ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ, ಎಲ್ಲ ಕೇಂದ್ರ ಸರ್ಕಾರಿ ನೌಕರರು ಹಿಂದಿ ಮತ್ತು ಇಂಗ್ಲಿಷ್ನ ದ್ವಿಭಾಷಿಗಳಾಗಿರಬೇಕು ಎಂದು ಒತ್ತಾಯಿಸಬೇಕು ಎಂದು ಚಿದಂಬರಂ ಹೇಳಿದ್ದಾರೆ.
‘ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯ್ಕೆಯಾದ ಹಿಂದಿಯೇತರ ಉದ್ಯೋಗಿಗಳು ಬೇಗ ಹಿಂದಿ ಕಲಿಯುತ್ತಾರೆ. ಆದರೆ, ಅದೇ ಹುದ್ದೆಗಳಿಗೆ ನೇಮಕವಾಗುವ ಹಿಂದಿ ಭಾಷಿಕರು ಇಂಗ್ಲಿಷ್ ಅನ್ನು ಮಾತ್ರ ಕಲಿಯುವುದಿಲ್ಲ,’ ಎಂದಿದ್ದಾರೆ.
ಹಿಂದಿ ಮಾತನಾಡಲು ಬರಲಿಲ್ಲ ಎಂಬ ಕಾರಣಕ್ಕೆ ಕನಿಮೋಳಿ ಅವರಿಗೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ‘ನೀವು ಭಾರತಿಯರೇ’ ಎಂದು ಕೇಳಿದ್ದಾರೆ ಎಂದು ಡಿಎಂಕೆ ಸಂಸದೆ ಆರೋಪಿಸಿದ್ದಾರೆ. ಬಿಜೆಪಿ ಅವರ ಆರೋಪವನ್ನು 'ಚುನಾವಣಾ ಗಿಮಿಕ್' ಎಂದು ತಳ್ಳಿಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ "ವಿಧಾನಸಭಾ ಚುನಾವಣೆಗಳು 8 ತಿಂಗಳುಗಳು ದೂರದಲ್ಲಿವೆ. ಈಗಾಗಲೆ ಪ್ರಚಾರ ಪ್ರಾರಂಭವಾಗುತ್ತಿದೆ" ಎಂದಿದ್ದಾರೆ.