ನವದೆಹಲಿ: ಥ್ರೀ ಈಡಿಯಟ್ಸ್ ಹಿಂದಿ ಚಲನಚಿತ್ರ ನೋಡಿದವರು ಅದರಲ್ಲಿನ ಅಮೀರ್ ಖಾನ್ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿರುತ್ತಾರೆ. ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿರುವ ಸೋನಮ್ ವಾಂಗ್ಚುಕ್ ಎಂಬ ವ್ಯಕ್ತಿಯ ಪಾತ್ರವು ನಿಜ ಜೀವನದಲ್ಲಿ ಅದೇ ವ್ಯಕ್ತಿಯ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿರುವಂಥದ್ದು ಎಂಬುದು ಈಗಿನ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಹೌದು. ಸೋನಮ್ ವಾಂಗಚುಕ್ ಇತ್ತೀಚೆಗೆ ಭಾರತದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಭಾರತದ ಗಡಿಯಲ್ಲಿ ಚೀನಾದ ದುಸ್ಸಾಹಸಗಳನ್ನು ಉಗ್ರವಾಗಿ ಖಂಡಿಸುವ ಹಾಗೂ ಚೀನಾದ ಕುತಂತ್ರಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ವಾಂಗಚುಕ್ ಮಾತುಗಳನ್ನು ಕೇಳುವುದೇ ಒಂದು ಸೊಗಸು. ಸದ್ಯ ಭಾರತ ಹಾಗೂ ಚೀನಾ ಶೀತಲ ಸಮರದ ಸಮಯದಲ್ಲಿ ಚೀನಾ ನಿರ್ಮಿತ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಲುವಾಗಿ ಆಂದೋಲನ ಹಮ್ಮಿಕೊಂಡಿರುವ ವಾಂಗ್ಚುಕ್ ಈಟಿವಿ ಭಾರತ್ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಾಂಗ್ಚುಕ್ ಅವರ ಪ್ರಬುದ್ಧ ಆಲೋಚನೆಗಳನ್ನು ಅವರು ಮಾತಿನಲ್ಲೇ ಕೇಳೋಣ ಬನ್ನಿ
ಪ್ರಶ್ನೆ: ವ್ಯಾಲೆಟ್ ವಿರುದ್ಧ ಬುಲೆಟ್ ಎಂಬ ಐಡಿಯಾ ನಿಮಗೆ ಹೊಳೆದಿದ್ದು ಹೇಗೆ?
ಸೋನಮ್ ವಾಂಗ್ಚುಕ್: ಲಡಾಖ್ನಲ್ಲಿ ನಾನು ವಾಸಿಸುತ್ತಿರುವಾಗ ಚೀನಾದ ಅನಾಗರಿಕತೆ, ಪ್ರಾಬಲ್ಯ ಮೆರೆಯುವಿಕೆ ಅಥವಾ ಒಳನುಸುಳುವಿಕೆ ಮುಂತಾದ ಎಲ್ಲ ದುರಾಚಾರಗಳನ್ನು ಆಗಾಗ ನೋಡುತ್ತಲೇ ಇದ್ದೆ. ಚೀನಾದ ಈ ದುಸ್ಸಾಹಸಗಳಿಂದ ಲಡಾಖ್ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಪಶು ಪಾಲನೆ ಮಾಡುವವರಿಗೆ ತಮ್ಮ ಪಶುಗಳನ್ನು ಮೇಯಿಸಲು ಜಾಗವೇ ಇಲ್ಲದಂತಾಗಿದೆ. ಇದ್ದ ಜಾಗವನ್ನೆಲ್ಲ ಕಬಳಿಸಲು ಚೀನಾ ಹುನ್ನಾರ ನಡೆಸುತ್ತಿದೆ. ಇದನ್ನು ತಡೆಯಲು ಏನಾದರೂ ಮಾಡಬೇಕೆಂದು ಹಲವಾರು ದಿನಗಳಿಂದ ನಾನು ಯೋಚಿಸುತ್ತಲೇ ಇದ್ದೆ.
ಕಳೆದ ಕೆಲ ದಿನಗಳ ಹಿಂದೆ ಮತ್ತೆ ಯಾವಾಗ ಅವರು ಒಳನುಸುಳಲಾರಂಭಿಸಿದರೋ ಆವಾಗ, ಅವರ ಉದ್ದೇಶ ಹಾಗೂ ಗುರಿಗಳು ಬೇರೆಯೇ ಇವೆ ಎಂಬುದು ಅರ್ಥವಾಗತೊಡಗಿತು. ಕೇವಲ ಗಡಿ ದಾಟುವುದು ಖಂಡಿತ ಅವರ ಉದ್ದೇಶವಾಗಿರಲಿಕ್ಕಿಲ್ಲ. ಕೋವಿಡ್-19 ನಂತಹ ಮಹಾಮಾರಿಯಿಂದ ಆಘಾತಗೊಂಡಿರುವ ದೇಶವೊಂದು ಇಂಥ ಕೆಲಸ ಮಾಡಲಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಭಾರತ ಮಾತ್ರವಲ್ಲದೇ ವಿಯೆಟ್ನಾಂ, ತೈವಾನ್ ಸೇರಿದಂತೆ ಅಮೆರಿಕ ನೌಕಾಪಡೆಗಳನ್ನೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಕೆಣಕಲಾರಂಭಿಸಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ದುಸ್ಸಾಹಸಗಳ ಹಿಂದೆ ಬೇರೆಯೇ ಉದ್ದೇಶ ಅಡಗಿದೆ ಎಂಬುದು ಸ್ಪಷ್ಟ. ತನ್ನ ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿಯನ್ನು ನಿಯಂತ್ರಿಸಲು ವಿಫಲಗೊಂಡ ಚೀನಾ ಆಂತರಿಕವಾಗಿ ಪ್ರಜೆಗಳಿಂದ ತೀವ್ರ ಆಕ್ರೋಶ ಎದುರಿಸುತ್ತಿದೆ. ಅವರ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಜನರ ಸಹನೆಯ ಕಟ್ಟೆಯೊಡೆದಿದೆ. ಇಂತಹ ಸಮಯದಲ್ಲಿ ಜನತೆಯ ಗಮನವನ್ನು ಬೇರೆಡೆ ತಿರುಗಿಸಲು ಚೀನಾ ಈ ಕಸರತ್ತು ಮಾಡುತ್ತಿದೆ.
ತನ್ನ ಅರ್ಥವ್ಯವಸ್ಥೆಯನ್ನು ಹಳಿಗೆ ತರಲು ಚೀನಾ ಇಷ್ಟೆಲ್ಲ ಸಾಹಸ ಮಾಡುತ್ತಿದೆ ಎಂದಾದರೆ ನಾವು ಮೊದಲಿಗೆ ಅವರ ಅರ್ಥವ್ಯವಸ್ಥೆಯನ್ನೇ ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ಚೀನಾದ ಕುತಂತ್ರದ ಬಲೆಗೆ ಬಿದ್ದು ನಾವು ಗನ್ ಹಾಗೂ ಬುಲೆಟ್ಗಳಿಂದ ಅವರಿಗೆ ಉತ್ತರ ಕೊಡಬಾರದು. ಇಂತಹ ಸಮಯದಲ್ಲಿ ಚೀನಾದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವುದೇ ನಮ್ಮ ಗುರಿಯಾಗಬೇಕು.
ಭಾರತೀಯ ಪ್ರಜೆಗಳೇ ಇದನ್ನು ಮಾಡಬಲ್ಲರು ಎಂದು ನಾನು ದೃಢವಾಗಿ ನಂಬಿರುವೆ. ದೇಶದ ಮೂಲೆ ಮೂಲೆಯಲ್ಲಿರುವ ಭಾರತೀಯರು ತಮ್ಮ ಮೊಬೈಲ್ಗಳಲ್ಲಿನ ಚೀನಾ ಆ್ಯಪ್ಗಳನ್ನು ಅನ್ ಇನ್ಸ್ಟಾಲ್ ಮಾಡುವುದರ ಮೂಲಕ ಇದನ್ನು ಸಾಧಿಸಬಲ್ಲರು. ನೋಡಲು ಇದು ತೀರಾ ಚಿಕ್ಕ ಕೆಲಸವಾಗಿ ಕಂಡರೂ, ಯಾವಾಗ ಲಕ್ಷ ಹಾಗೂ ಕೋಟಿಗಳ ಲೆಕ್ಕದಲ್ಲಿ ಚೀನಾ ಆ್ಯಪ್ಗಳು ಅನ್ ಇನ್ಸ್ಟಾಲ್ ಆಗಲಾರಂಭಿಸುತ್ತವೆಯೋ ಆಗ ಅವರಿಗೆ ನಿಜವಾಗಿಯೂ ಆಘಾತ ಉಂಟಾಗಲಿದೆ. ಇದರ ಜೊತೆಗೆ ಕುಸಿಯುತ್ತಿರುವ ಅರ್ಥವ್ಯವಸ್ಥೆಯ ವಿರುದ್ಧ ಜನರ ಆಂತರಿಕ ಆಕ್ರೋಶವೂ ಭುಗಿಲೇಳುತ್ತದೆ.
ಪ್ರಶ್ನೆ: ಚೀನಾದ ಆ್ಯಪ್ ಹಾಗೂ ವಸ್ತುಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇಂಥ ಪರಿಸ್ಥಿತಿಯಲ್ಲಿ ಅವನ್ನು ನಿರ್ಬಂಧಿಸುವುದು ವಾಸ್ತವಿಕವಾಗಿ ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗೆ ಮಾಡುವುದು ಅಸಾಧ್ಯವಲ್ಲವಾದರೂ ತೀರಾ ಕಷ್ಟಕರ ಎನಿಸುತ್ತದೆ. ಇದರ ಬಗ್ಗೆ ನೀವೇನಂತೀರಿ?
ಸೋನಮ್ ವಾಂಗ್ಚುಕ್: ಹೌದು.. ಇದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಈ ಜಗತ್ತಿನಲ್ಲಿ ಹಲವಾರು ಕೆಲಸಗಳು ತೀರಾ ಕಷ್ಟಕರವಾಗಿವೆ. ಜೈನ ಧರ್ಮೀಯರು ಈರುಳ್ಳಿ, ಬೆಳ್ಳುಳ್ಳಿ ಮತ್ತು ಗಜ್ಜರಿಗಳನ್ನು ತಿನ್ನುವುದೇ ಇಲ್ಲ. ಅವನ್ನೆಲ್ಲ ತಿನ್ನದೇ ಅವರು ಬದುಕಿಲ್ಲವೇ? ಹೀಗಾಗಿ ಯಾವುದೂ ಕಷ್ಟವಲ್ಲ. ವ್ಯಕ್ತಿಯೊಬ್ಬ ಒಂದು ವಿಚಾರಕ್ಕೆ ಸಮರ್ಪಿತನಾದರೆ ಉಳಿದೆಲ್ಲ ವಿಷಯಗಳು ಅದಕ್ಕೆ ತಕ್ಕಂತೆ ತಾನಾಗಿಯೇ ಮಾರ್ಪಾಟಾಗುತ್ತವೆ.
ಜೈನ ಧರ್ಮೀಯರು ಎಲ್ಲಿಗೇ ಹೋದರೂ ಅವರಿಗೆ ಬೇಕಾದ ಆಹಾರ ಸಿಗುತ್ತದೆ. ಶಾಕಾಹಾರಿ ವ್ಯಕ್ತಿಗೆ ಆತ ಬಯಸಿದ ಆಹಾರ ಸಿಕ್ಕೇ ಸಿಗುತ್ತದೆ. ಇನ್ನು ರಕ್ತ ಹೆಪ್ಪುಗಟ್ಟಿಸುವ ಚಳಿಯ ವಾತಾವರಣ ಇರುವ ಚೀನಾ-ಭಾರತ ಗಡಿಯಲ್ಲಿ ಭಾರತದ ಯೋಧರು ದೇಶ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಅವರ ಶೌರ್ಯದ ಮುಂದೆ ನೀವು ಒಂದು ಆ್ಯಪ್ ಅನ್ ಇನ್ಸ್ಟಾಲ್ ಮಾಡುವುದು ಎಷ್ಟು ಸಣ್ಣ ಕೆಲಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರ ತ್ಯಾಗದ ಮುಂದೆ ಒಂದು ಆ್ಯಪ್ ಅನ್ ಇನ್ಸ್ಟಾಲ್ ಮಾಡುವುದು ಏನೇನೂ ಅಲ್ಲ. ನೀವು ಇಷ್ಟನ್ನೂ ಮಾಡಲಾರಿರಿ ಎಂದರೆ ನಾನೇನು ಹೇಳಲಿ?
ಪ್ರಶ್ನೆ: ಸಾಮಾನ್ಯ ಭಾರತೀಯರ "ಚಲ್ತಾ ಹೈ" ಎಂಬ ಧೋರಣೆ ನಿಮಗೆ ಚಿಂತೆ ಮೂಡಿಸುವುದಿಲ್ಲವೇ?
ಸೋನಮ್ ವಾಂಗ್ಚುಕ್: ನಿಜ... ಭಾರತೀಯರ ಈ ಧೋರಣೆಯ ಬಗ್ಗೆ ನನಗೆ ಸಾಕಷ್ಟು ಸಿಟ್ಟಿದೆ. ಒಂದು ದೇಶವಾಗಿ ನಾವು ಹಿನ್ನಡೆ ಅನುಭವಿಸಿದ್ದರೆ ಅದಕ್ಕೆ ಈ "ಚಲ್ತಾ ಹೈ" ಧೋರಣೆಯೇ ಕಾರಣವಾಗಿದೆ. ಈ ವಿಷಯದಲ್ಲಿ ಚೀನಾದವರನ್ನು ನಾವು ನೋಡಿ ಕಲಿಯುವುದು ಬಹಳಷ್ಟಿದೆ. ಅವರು ಏನೇ ಮಾಡಿದರೂ ಅದರ ಬಗ್ಗೆ ಖಚಿತತೆಯನ್ನು ಹೊಂದಿರುತ್ತಾರೆ. ಹೀಗಾಗಿಯೇ ಎಲ್ಲದರಲ್ಲೂ ಯಶಸ್ಸು ಕಾಣುತ್ತಾರೆ.
ಆದರೆ ನಮ್ಮಲ್ಲಿ ಮಾತ್ರ ಒಂದು ರೀತಿಯ ನಿರ್ಲಕ್ಷ್ಯದ ವಾತಾವರಣ ಇದೆ. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಕಳೆದ ಕೆಲ ತಿಂಗಳಲ್ಲಿ ನಾವು ಜಾಗತಿಕವಾಗಿ ಸಾಕಷ್ಟು ಮುಂದೆ ಇದ್ದೆವು. ಆದರೆ ಈಗ ಲಾಕ್ಡೌನ್ ಸಡಿಲಿಕೆ ಮಾಡಿದ ನಂತರ ಈ "ಚಲ್ತಾ ಹೈ" ಎಂಬ ಧೋರಣೆ ಎಲ್ಲವನ್ನೂ ನುಂಗಿ ನೀರು ಕುಡಿದಂತೆ ಕಾಣುತ್ತಿದೆ. ಒಂದು ವೇಳೆ ಸಾಕಷ್ಟು ಮುಂಜಾಗರೂಕತೆ ವಹಿಸದಿದ್ದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವು ಸೋಲು ಕಾಣಬಹುದಾಗಿದೆ.
ಒಂದೊಮ್ಮೆ ವೈರಸ್ ನಮ್ಮನ್ನು ಮೀರಿಸಿ ಬೆಳೆದು ಬಿಟ್ಟರೆ ಚೀನಾ ವಿರುದ್ಧ ನಾವು ಹೋರಾಡುವುದಾದರೂ ಹೇಗೆ? ಇನ್ನೊಂದು ಕಡೆ ನೋಡಿದರೆ ಚೀನಾ ನಾಗರಿಕರು ಸಾಕಷ್ಟು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಅದೇ ಕಾರಣಕ್ಕೆ ಚೀನಾ ಕೊರೊನಾ ವೈರಸ್ ಅನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತಿದೆ. ಈ ಸಮಯದಲ್ಲಿ ಭಾರತೀಯರಾದ ನಾವು ಒಂದಿಷ್ಟು ಶಿಸ್ತು ಅಳವಡಿಸಿಕೊಳ್ಳುವುದು ಅನಿವಾರ್ಯ. ಆಗ ಮಾತ್ರ ನಾವು ಈ ಹೋರಾಟದಲ್ಲಿ ಯಶಸ್ಸು ಕಾಣಲು ಸಾಧ್ಯ.