ಜಯಶಂಕರ್ ಭೂಪಾಲ್ಪಲ್ಲಿ(ತೆಲಂಗಾಣ):ಮಹಾದೇವ್ಪೂರ್ ತಾಲೂಕಿನ ಪೆದ್ದಂಪೇಟ್ ಅರಣ್ಯ ಪ್ರದೇಶದಲ್ಲಿಪೊಲೀಸರು ಮತ್ತು ನಕ್ಸಲರ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ.
ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿರುವುದಿಂದ ಕಳೆದ ಒಂದು ವಾರದಿಂದ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನಿನ್ನೆ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. 20 ರಿಂದ 25 ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು, ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ದಾಳಿ ಬಳಿಕ ಪೊಲೀಸರು ಒಂದು ರೈಫಲ್, 8 ಕಿಟ್ ಬ್ಯಾಗ್ ಮತ್ತು ವೈದ್ಯಕೀಯ ಕಿಟ್, ಅಡುಗೆ ಪಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.
ನಕ್ಸಲರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದೆವು. ಮಂಗಳವಾರ ಅವರ ಗುರುತು ಪತ್ತೆಯಾಗಿದ್ದು, ದಾಳಿ ಮಾಡಲಾಗಿತ್ತು. ಆದ್ರೆ ಈ ವೇಳೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧೀಕ್ಷಕ ಸಂಗ್ರಾಮ್ ಸಿಂಗ್ ಜಿ. ಪಾಟೀಲ್ ತಿಳಿಸಿದರು.
ಶಾಂತಿ ಹಾಳುಮಾಡುವ ಉದ್ದೇಶ ಮತ್ತು ಉದ್ಯಮಿ, ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸುವ ಯೋಜನೆಯನ್ನು ನಕ್ಸಲರು ಹಾಕಿದ್ದರು. ಪರಾರಿಯಾದ ನಕ್ಸಲರ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.