ನವದೆಹಲಿ: ಪ್ರತಿ ಪಕ್ಷದ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಗುರುವಾರ ರಾಜ್ಯಸಭೆಯ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯಸಭಾ ನೂತನ ಸಂಸದರಾಗಿ ನಿವೃತ್ತ ಸಿಜೆಐ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ ರಾಜ್ಯ ಸಭೆಗೆ ಗೊಗೊಯ್ ಅವರ ನಾಮನಿರ್ದೇಶನ ಮಾಡಿದ ರಾಷ್ಟ್ರಪತಿಗಳ ಕ್ರಮ ಖಂಡಿಸಿದ ಕಾಂಗ್ರೆಸ್ ಸದಸ್ಯರು, ಪ್ರಮಾಣವಚನ ಸ್ವೀಕರಿಸಲು ಗೊಗೊಯ್ ವೇದಿಕೆ ಏರುತ್ತಿದ್ದಂತೆಯೇ ಘೋಷಣೆ ಕೂಗಲು ಪ್ರಾರಂಭಿಸಿದರು. ರಾಜ್ಯ ಸಭೆಗೆ ಗೊಗೊಯ್ ಅವರು ಅನರ್ಹರು ಎಂದು ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗಿ ಬಳಿಕ ಸಂಸತ್ತಿನಿಂದ ಹೊರನಡೆದರು.
ಸಂಸತ್ತಿನಿಂದ ಹೊರನಡೆದ ಕಾಂಗ್ರೆಸ್ ಸಂಸತ್ತಿಗೆ ರಂಜನ್ ಗೊಗೊಯ್ ಅವರನ್ನು ಸ್ವಾಗತಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಮಾಜಿ ಸಿಜೆಐಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಬರುವ ಅನೇಕ ಗಣ್ಯ ವ್ಯಕ್ತಿಗಳನ್ನು ಬರಮಾಡಿಕೊಳ್ಳುವ ಸಂಪ್ರದಾಯವನ್ನು ರಾಜ್ಯಸಭೆ ಹೊಂದಿದೆ. ಇಂದು ಪ್ರಮಾಣವಚನ ಸ್ವೀಕರಿಸಿರುವ ಗೊಗೊಯ್ ಖಂಡಿತವಾಗಿಯೂ ಅತ್ಯುತ್ತಮ ಸೇವೆ ಸಲ್ಲಿಸುತ್ತಾರೆ ಎಂದು ಸಮರ್ಥಿಸಿಕೊಂಡರು. ಅಲ್ಲದೇ ಪ್ರತಿ ಪಕ್ಷದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರಮಾಣವಚನದ ವೇಳೆ ಗೊಗೊಯ್ ಅವರ ಪತ್ನಿ ರುಪಾಂಜಲಿ ಗೊಗೊಯ್, ಪುತ್ರಿ, ಅಳಿಯ ಕೂಡ ಸಂಸತ್ನಲ್ಲಿ ಹಾಜರಿದ್ದರು. ಗೊಗೊಯ್ ಅವರು 2018ರ ಅ.3 ರಿಂದ 2019ರ ನವೆಂಬರ್ 17ರ ವರೆಗೆ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. 2020ರ ಮಾ.16 ರಂದು ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಆದೇಶ ಹೊರಡಿಸಿದ್ದರು.