ನವದೆಹಲಿ: ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ಕೆಲವು ಭಾಗಗಳು ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕಾರಣ ಐರೋಪ್ಯ ಒಕ್ಕೂಟ (ಇಯು) ಮಂಗಳವಾರ ದಕ್ಷಿಣ ಏಷ್ಯಾದ ಈ ರಾಷ್ಟ್ರಗಳಿಗೆ 1.65 ದಶಲಕ್ಷ ಯುರೋ ನೆರವು ಘೋಷಿಸಿದೆ.
ಮೇ ತಿಂಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ತೀವ್ರ ಹಾನಿಯುಂಟು ಮಾಡಿದ್ದ ಅಂಫಾನ್ ಚಂಡಮಾರುತ ಸೇರಿದಂತೆ ಪ್ರಕೃತಿ ವಿಕೋಪಕ್ಕೆ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಈ ವರ್ಷದ ಆರಂಭದಲ್ಲಿ ಇಯು 1.8 ದಶಲಕ್ಷ ಯುರೋಗಳಷ್ಟು ಸಹಾಯವನ್ನು ಘೋಷಿಸಿತ್ತು. ಇದೀಗ ನೆರೆಯಿಂದ ಹಾನಿಗೊಳಗಾದ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ 1.65 ದಶಲಕ್ಷ ಯುರೋ ಸಹಾಯ ನೀಡಿದೆ.
ದಕ್ಷಿಣ ಏಷ್ಯಾದಾದ್ಯಂತ ಮಾನ್ಸೂನ್ ಮಳೆ ಈ ವರ್ಷ ವಿನಾಶಕಾರಿಯಾಗಿದೆ ಮತ್ತು ಈ ತುರ್ತು ಕೊಡುಗೆ ಆಶ್ರಯ, ವಸ್ತುಗಳು ಮತ್ತು ಜೀವನೋಪಾಯದ ಮೂಲಗಳನ್ನು ಕಳೆದುಕೊಂಡವರಿಗೆ ನಿರ್ಣಾಯಕ ಬೆಂಬಲವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ಏಷ್ಯಾ ಮತ್ತು ಫೆಸಿಫಿಕ್ ದೇಶಗಳಲ್ಲಿ ಇಯು ಮಾನವೀಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ತಾಹೇನಿ ತಮ್ಮಣ್ಣಗೋಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರವಾಹವು ಸುಮಾರು 17.5 ದಶಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಮನೆಗಳನ್ನು ನಾಶಪಡಿಸಿದೆ. ಜಾನುವಾರು ಮತ್ತು ಕೃಷಿ ಜಮೀನುಗಳಂತಹ ಜೀವನೋಪಾಯ ಮತ್ತು ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯುಂಟು ಮಾಡಿದೆ.
1.65 ದಶಲಕ್ಷ ಯುರೋಗಳಲ್ಲಿ, 1 ದಶಲಕ್ಷ ಯುರೋಗಳು ಬಾಂಗ್ಲಾದೇಶದ ತುರ್ತು ಮಾನವೀಯ ಅಗತ್ಯಗಳನ್ನು ಪರಿಹರಿಸಲು ಮೀಸಲಿಡಲಾಗುವುದು. ಅಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ, ನೀರು, ನೈರ್ಮಲ್ಯ ಮತ್ತು ತುರ್ತು ಆಶ್ರಯದ ಅಗತ್ಯವಿದೆ ಎಂದು ಇಯು ಹೇಳಿದೆ.