ರತ್ಲಂ (ಮಧ್ಯಪ್ರದೇಶ): 'ಮದರ್ ತೆರೇಸಾ ಆಫ್ ಮಾಲ್ವಾ', ಇದು ಮಧ್ಯ ಪ್ರದೇಶದ ರತ್ಲಂ ಮೂಲದ ಡಾ. ಲೀಲಾ ಜೋಶಿ ಅವರಿಗೆ ನೀಡಲಾಗಿರುವ ಬಿರುದು. ರತ್ಲಂನ ಮಾಲ್ವಾದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ರಕ್ತದ ಕೊರತೆಯ ಸಮಸ್ಯೆಗೆ (ರಕ್ತಹೀನತೆ) ಚಿಕಿತ್ಸೆ ನೀಡುವ ಅಭಿಯಾನವನ್ನು ಡಾ. ಲೀಲಾ ಜೋಶಿ ನಡೆಸುತ್ತಿದ್ದು, ಅವರ ಈ ಸೇವೆಗೆ ‘ಮದರ್ ತೆರೇಸಾ ಆಫ್ ಮಾಲ್ವಾ’ ಎಂದು ಬಿರುದು ನೀಡಲಾಗಿದೆ.
ಈ ವೈದ್ಯೆ ಕೇವಲ ತಮ್ಮ ರೋಗಿಗಳಿಗೆ ರಕ್ತಹೀನತೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿಲ್ಲ, ಬದಲಾಗಿ ತಮ್ಮ 82ನೇ ವಯಸ್ಸಿನಲ್ಲಿಯೂ ಅಸ್ವಸ್ಥತೆಯ ವಿರುದ್ಧದ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತಹೀನತೆ ಕುರಿತು ಇವರ ಸಾಮಾಜಿಕ ಅಭಿಯಾನವನ್ನು ಗುರುತಿಸಿರುವ ಭಾರತ ಸರ್ಕಾರ, ಇವರಿಗೆ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಈಟಿವಿ ಭಾರತ್ ಪದ್ಮ ಪ್ರಶಸ್ತಿ ಪಡೆದಿರುವ ಮಹಿಳಾ ಸಾಧಕಿಯರ ಬಗ್ಗೆ ವಿಶೇಷ ಸರಣಿ ಪ್ರಸಾರ ಮಾಡುತ್ತಿದೆ. ಸಾಮಾನ್ಯ ಮಹಿಳೆಯಾಗಿ ಉಳಿಯದೆ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಡಾ. ಲೀಲಾ ಜೋಶಿ ಈಟಿವಿ ಭಾರತ್ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಮಹಿಳೆಯರ ಆರೋಗ್ಯದ ಮಹತ್ವವನ್ನು ಒತ್ತಿಹೇಳಿರುವ ಡಾ. ಲೀಲಾ ಜೋಶಿ, ತಮ್ಮ ಮುಂದಿನ ಯೋಜನೆಗಳು ಹಾಗೂ ಮಹಿಳೆಯರ ಆರೋಗ್ಯದ ಕುರಿತ ಸರ್ಕಾರದ ಅಭಿಯಾನಗಳ ಬಗ್ಗೆ ಚರ್ಚಿಸಿದ್ದಾರೆ. ಹಾಗೆಯೇ ಪ್ರತಿಯೊಬ್ಬರೂ ಆರೋಗ್ಯವಾಗಿರಲು ಸಹಾಯ ಮಾಡುವ ಪ್ರಮುಖ ಅಂಶವೊಂದನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ:
1997 ರಲ್ಲಿ ಮದರ್ ತೆರೇಸಾ ಅವರನ್ನು ಭೇಟಿ ಮಾಡುವ ಅವಕಾಶ ಲೀಲಾ ಜೋಶಿಗೆ ಸಿಕ್ಕಿತ್ತು. ಆಗ ಮದರ್ ತೆರೇಸಾರಿಂದ ಪ್ರಭಾವಿತರಾದ ಲೀಲಾ ಜೋಶಿ, ರಕ್ತಹೀನತೆಯಿಂದ ಬಳಲುತ್ತಿರುವ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶಿಬಿರಗಳನ್ನು ಸ್ಥಾಪಿಸಿದ್ದರು.