ಲಕ್ನೋ : ಕೊರೊನಾ ಹಾಟ್ ಸ್ಪಾಟ್ಗಳಾಗಿ ಗುರುತಿಸಿರುವ ಉತ್ತರ ಪ್ರದೇಶ ರಾಜಧಾನಿಯ ಕೆಲ ಪ್ರದೇಶಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಪ್ರಮುಖ ಹಾಟ್ ಸ್ಪಾಟಾಗಿರುವ ಕಸಾಯಿ ಬಡಾ ಸೇರಿದಂತೆ ನಗರದ 13 ಕಡೆಗಳಲ್ಲಿ ಸಂಪೂರ್ಣ ಬಂದ್ ಮಾಡಲಾಗಿದ್ದು,ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಯಾರೂ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲು ಪೊಲೀಸರು ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ಪ್ರಮುಖವಾಗಿ 12 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಅಲೀಜನ್ ಮಸೀದಿ ಪ್ರದೇಶದಲ್ಲಿ ಹೆ್ಚ್ಚಿನ ನಿಗಾವಹಿಸಲಾಗಿದೆ. ಈ ಪ್ರದೇಶದಲ್ಲಿ ತಬ್ಲಿಘಿ ಜಮಾತ್ನವರ ಸಂಪರ್ಕದಿಂದ ಮತ್ತೆ 15 ಜನರಿಗೆ ಸೋಂಕು ತಗುಲಿದೆ. ಈ ಒಂದೇ ಪ್ರದೇಶದಲ್ಲಿ ಒಟ್ಟು 27 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
ನಗರದ ಪಶ್ಚಿಮ ವಿಭಾಗದ ಪೊಲೀಸ್ ಅಧಿಕಾರಿ ಖೇಮ್ ಪಾಲ್ ಸಿಂಗ್ ಮಾತನಾಡಿ, ಕಸಾಯಿ ಬಡಾ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ತರ್ತು ಅಗತ್ಯಕ್ಕಾಗಿ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು ಆಂಬ್ಯುಲೆನ್ಸ್ ಸಜ್ಜುಗೊಳಿಸಿಡಲಾಗಿದೆ. ಈ ಪ್ರದೇಶದ ಸಮುದಾಯಗಳ ಮುಖಂಡರು ಜನರನ್ನು ಸ್ವಯಂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರನ್ನು ಮನವೊಲಿಸುತ್ತಿದ್ದಾರೆ. ಆದರೆ, ಒಂದಿಬ್ಬರನ್ನು ಹೊರತುಪಡಿಸಿ ಯಾರೊಬ್ಬರು ಪರೀಕ್ಷಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದಿದ್ದಾರೆ.