ನವದೆಹಲಿ:ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷ ದೆಹಲಿ ಸರ್ಕಾರ ನಡೆಸಿದ ಆಡಳಿತ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಆರೂವರೆ ವರ್ಷದಿಂದ ದೆಹಲಿ ಸಿಎಂ ಯಾವುದೇ ಕೆಲಸ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕ ಸುಭಾಷ್ ಚೋಪ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಗೆಲುವು ಖಚಿತವೇ?
2015ರಲ್ಲಿ ನಡೆದ 70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸೀಟು ಗೆದ್ದಿಲ್ಲ. ಆದ್ರೆ, ಈ ಬಾರಿ ಚುನಾವಣೆಯಲ್ಲಿ ನಿಮ್ಮ ಗೆಲುವು ಖಚಿತವೇ? ಎಂಬ ಪ್ರಶ್ನೆಗೆ ಉತ್ತರಿಸಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚೋಪ್ರಾ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಏನೆಂಬುದನ್ನು ತೋರಿಸುತ್ತೇವೆ. ಅಲ್ಲಿಯವರೆಗೆ ಕಾಯಿರಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೇಲೆ ಆರೋಪ:
ಭ್ರಷ್ಟಾಚಾರ, ಲೋಕಪಾಲ ಮಸೂದೆ ಜಾರಿಯಂತಹ ವಿಷಯಗಳನ್ನು ಇಟ್ಟುಕೊಂಡು ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟದ ಮೂಲಕ ಅರವಿಂದ್ ಕೇಜ್ರಿವಾಲ್, 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಎಂಬ ಪಕ್ಷವನ್ನು ಕಟ್ಟಿ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಪಡೆದರು. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ರಾಜಕೀಯ ಅನನುಭವಿ ಎಂಬಂತೆ ವರ್ತಿಸಿ ಜನರಿಂದ ಅಪಹಾಸ್ಯಕ್ಕೀಡಾದರು. ಎಲ್ಲರಿಗೂ ಜನ ಲೋಕಪಾಲ ಮಸೂದೆ ಬೇಕು. ಆದ್ರೆ ಕಳೆದ ಆರೂವರೆ ವರ್ಷದಿಂದ ಏನಾಯ್ತು?. ಇದರ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಏನ್ ಹೇಳ್ತಾರೆ?. ಅವರಿಂದ ಏನೂ ಆಗಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಕೇಜ್ರಿವಾಲ್ಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆರೋಪಿಸಿದರು.
ಕೇಜ್ರಿವಾಲ್ ಮೇಲೆ ಗಂಭೀರ ಆರೋಪ:
ಜನ ನಾಯಕ್ ಜನತಾ ಪಕ್ಷ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ರೂವಾರಿ ಅರವಿಂದ್ ಕೇಜ್ರಿವಾಲ್. ಏಕೆಂದರೆ, ಈ ಹಿಂದೆ ಜೆಜೆಪಿ ಅಧ್ಯಕ್ಷ ದುಷ್ಯಂತ್ ಚೌಟಾಲಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನಡುವೆ ಸಂಬಂಧವಿತ್ತು. ಯಾವುದೇ ಷರತ್ತುಗಳನ್ನು ಪಾಲಿಸದೇ ರಾತ್ರೋರಾತ್ರಿ ದೆಹಲಿ ಸರ್ಕಾರ ದುಷ್ಯಂತ್ರ ತಂದೆ ಅಜಯ್ ಚೌಟಾಲಾರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಿತ್ತು. ಆದ್ರೆ ಈ ಬಗ್ಗೆ ದೆಹಲಿ ಗೃಹ ಸಚಿವ ಏನೂ ಮಾತನಾಡಲಿಲ್ಲ ಎಂದು ಕೇಜ್ರಿವಾಲ್ ವಿರುದ್ಧ ಹರಿಹಾಯ್ದರು.