ಅಹಮದಾಬಾದ್ :ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಮೂರನೇ ಸ್ಥಾನದಲ್ಲಿದೆ. ಮುಂಬೈ ಬಳಿಕ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಅಹಮದಾಬಾದ್‌ರ ನಗರದಲ್ಲಿ ದಾಖಲಾಗಿವೆ. ಹೀಗಾಗಿ ಅಹಮದಾಬಾದ್ ನಗರವನ್ನು ಕೊರೊನಾ ಹಾಟ್ಸ್ಪಾಟ್ ಆಗಿ ಗುರುತಿಸಲಾಗಿದೆ. ನಗರದಲ್ಲಿ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಮೇ 25 ರವರೆಗೆ ಗುಜರಾತ್‌ನಲ್ಲಿ ಒಟ್ಟು 14,063 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 888 ಸಾವುಗಳು ಸಂಭವಿಸಿವೆ. ಈ ಪೈಕಿ ಅಹಮದಾಬಾದ್ ನಗರದಲ್ಲಿ 10,590 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 722 ಸಾವುಗಳು ಸಂಭವಿಸಿವೆ. ಅಂದರೆ ಅಹಮದಾಬಾದ್ ನಗರದಲ್ಲಿ ಮಾತ್ರ ಶೇ. 81.30 ರಷ್ಟು ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಮೇ 24 ರಂದು 29 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಈ ಪೈಕಿ 28 ಜನರು ಅಹಮದಾಬಾದ್ ನಗರದವರಾಗಿದ್ದಾರೆ. ಹೀಗಾಗಿ ಸೋಂಕಿತ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ.
ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ರೋಗಿಗಳನ್ನು ಪ್ರಾಣಿಗಳಂತೆ ಪರಿಗಣಿಸಿ ಅವರನ್ನು ಸಾಯಲು ಬಿಡುವುದಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದೆ. ಅಲ್ಲದೆ ಆರೋಗ್ಯ ಸಚಿವರು ಮತ್ತು ಆರೋಗ್ಯ ಕಾರ್ಯದರ್ಶಿ ಎಷ್ಟು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದೆ.
ಕೋವಿಡ್- 19 ರೋಗಿಗಳಿಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ 1,200 ಹಾಸಿಗೆಗಳ ವಿಶೇಷ ಸೌಲಭ್ಯ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಬಿಡುತ್ತಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ. ಇನ್ನು ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ರೋಗಿಗಳ ಬಳಿ ಬರುವುದೇ ಇಲ್ಲ, ನರ್ಸ್ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ದಿನದಲ್ಲಿ ಒಂದು ಬಾರಿ ಮಾತ್ರ ಬಂದು ಹೋಗುತ್ತಾರೆ. ಆಮೇಲೆ ರೋಗಿಗಳ ಬಳಿ ಯಾರೂ ಬರುವುದಿಲ್ಲ ಎಂಬ ಆರೋಪವೂ ಸಿವಿಲ್ ಆಸ್ಪತ್ರೆಯ ಮೇಲಿದೆ.
ಇನ್ನು ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯೊಳಗೆ ಬರಲು ಅನುಮತಿ ಇಲ್ಲ, ಹಾಗಾಗಿ ಸಿಬ್ಬಂದಿಗಳು ಇಲ್ಲದಾಗ ಸಂಬಂಧಿಕರು ಬಂದು ರೋಗಿಯನ್ನು ಭೇಟಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕಂದರೆ ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದ್ದು, ಕೋವಿಡ್ ರೋಗಿಗಳ ಬಗ್ಗೆ ತಾಳುತ್ತಿರುವ ನಿರ್ಲಕ್ಷ್ಯ ಭಾವವೇ ಅತೀ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.