ಹೈದರಾಬಾದ್: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಸಮಾವೇಶ ನಡೆಸಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ ನಂತರ ತಬ್ಲೀಘಿ ಜಮಾತ್ ಈಗ ಬಹಳೇ ಸುದ್ದಿಯಲ್ಲಿದೆ. ಆದರೆ ಈ ತಬ್ಲೀಘಿ ಜಮಾತ್ ಎಂದರೇನು? 1000 ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಕೋವಿಡ್-19 ಸೋಂಕು ಹರಡಲು ಕಾರಣವಾದ ಈ ಜಮಾತ್ ಸ್ಥಾಪಿಸಿದವರು ಯಾರು? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ ಈಟಿವಿ ಭಾರತ್.
ತಬ್ಲೀಘಿ ಜಮಾತ್ ಎಂದರೇನು?
ತಬ್ಲೀಘಿ ಜಮಾತ್ ಇದೊಂದು ಇಸ್ಲಾಮಿಕ್ ಮತಪ್ರಚಾರಕ ಚಳವಳಿಯಾಗಿದೆ. ಪ್ರವಾದಿ ಮಹಮ್ಮದರ ಕಾಲದಲ್ಲಿ ಪಾಲಿಸಲಾಗುತ್ತಿದ್ದ ರೀತಿಯಲ್ಲೇ ಈಗಲೂ ಇಸ್ಲಾಂ ಧರ್ಮವನ್ನು ಮುಸಲ್ಮಾನರು ಪಾಲಿಸಬೇಕೆಂಬ ಗುರಿ ಇದರದಾಗಿದೆ. ಅದರಲ್ಲೂ ನಿರ್ದಿಷ್ಟವಾಗಿ ಧರ್ಮಾಚರಣೆಗಳು, ವೇಷ ಭೂಷಣ ಮತ್ತು ವೈಯಕ್ತಿಕ ನಡವಳಿಕೆಗಳ ವಿಷಯಗಳನ್ನು ಇದು ಪ್ರತಿಪಾದಿಸುತ್ತದೆ.
ದೇವಬಂದಿ ಇಸ್ಲಾಮಿಕ್ ವಿದ್ವಾಂಸ ಮುಹಮ್ಮದ್ ಇಲಿಯಾಸ್ ಅಲ್-ಕಂಧಲಾವಿ ಎಂಬುವರು ಇದನ್ನು 1926ನೇ ಇಸ್ವಿಯಲ್ಲಿ ಮೇವಾತ್ನಲ್ಲಿ ಆರಂಭಿಸಿದರು.
ತಬ್ಲೀಘಿ ಜಮಾತ್ ಪ್ರಾರಂಭಿಸಿದವರು ಯಾರು?
ತಬ್ಲೀಘಿ ಜಮಾತನ್ನು ಹರಿಯಾಣದ ಮೇವಾತ್ ಪ್ರದೇಶದಲ್ಲಿ 1926 ರಲ್ಲಿ ಹಜರತ್ ಮೌಲಾನಾ ಮೊಹಮ್ಮದ್ ಇಲಿಯಾಸ್ ರಹಮತುಲ್ಲಾಹಲೇಹ ಎಂಬುವರು ಆರಂಭಿಸಿದರು. ಇವರು ಮರ್ಕಜ್ ನಿಲಾಮುದ್ದೀನ್ ಮೌಲಾನಾ ಸಾದ್ ಅವರ ಪೂರ್ವಜರಾಗಿದ್ದಾರೆ.
ಪ್ರಸ್ತುತ ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರ ಪ್ರದೇಶದಲ್ಲಿನ ಕಾಂಡ್ಲಾ ಗ್ರಾಮವು ಮೌಲಾನಾ ಸಾದ್ ಅವರ ವಂಶಸ್ಥರ ಊರು ಎಂದು ಹೇಳಲಾಗಿದೆ. ನಿಜಾಮುದ್ದೀನ್ನಲ್ಲಿರುವ ಮರ್ಕಜ್ ಮೌಲಾನಾ ಸಾದ್ ಕುಟುಂಬದ ಮಾಲೀಕತ್ವಕ್ಕೆ ಒಳಪಟ್ಟಿದ್ದು, ಅವರ ನಿಯಂತ್ರಣದಲ್ಲಿದೆ.
ತಬ್ಲೀಘಿ ಜಮಾತ್ನ ಮೊದಲ ಸಮಾವೇಶ 1941 ರಲ್ಲಿ ನಡೆದಿದ್ದು, 25,000 ಜನ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ. 1940 ರವರೆಗೆ ಜಮಾತ್ನ ಕಾರ್ಯಚಟುವಟಿಕೆಗಳು ಅವಿಭಜಿತ ಭಾರತಕ್ಕೆ ಮಾತ್ರ ಸೀಮಿತವಾಗಿದ್ದವು. ನಂತರ ವರ್ಷಗಳು ಕಳೆದಂತೆ ಜಾಗತಿಕ ಮಟ್ಟದಲ್ಲಿ ಇದರ ಪ್ರಭಾವ ಬೆಳೆಯಿತು.
ಜಮಾತ್ನ ಕಾರ್ಯವೈಖರಿ ಹೇಗಿರುತ್ತದೆ?
ಜಮಾತ್ ಶಾಂತಿಯುತವಾಗಿ ಕೆಲಸ ಮಾಡುತ್ತದೆ ಹಾಗೂ ಜಗತ್ತಿನ ಎಲ್ಲ ಮುಸ್ಲಿಮರನ್ನು ತಲುಪುವ ಗುರಿಯನ್ನು ಹೊಂದಿದೆ. ಅಲ್ಲಾಹುವಿನ ಸಂದೇಶಗಳನ್ನು ಪ್ರಚಾರ ಮಾಡುವಂತೆ ಎಲ್ಲ ಮುಸಲ್ಮಾನರಿಗೆ ಪ್ರವಾದಿ ಮಹಮ್ಮದರು ಆದೇಶಿಸಿದ್ದು, ಇದನ್ನು ನೆರವೇರಿಸುವುದನ್ನು ತನ್ನ ಕರ್ತವ್ಯವೆಂದು ಜಮಾತ್ ತಿಳಿದುಕೊಂಡಿದೆ. ಜಮಾತ್ನಲ್ಲಿ ಪಾಲ್ಗೊಳ್ಳುವವರು ಸ್ಥಳೀಯ ಮಸೀದಿಗಳಲ್ಲೇ ವಾಸ ಮಾಡಬೇಕೆಂದು ಜಮಾತ್ ಸೂಚಿಸುತ್ತದೆ.
ತಬ್ಲೀಘಿ ಜಮಾತ್ ವಿಷಯ ದಿಢೀರ್ ಪ್ರಚಲಿತಕ್ಕೆ ಬಂದಿದ್ದು ಯಾಕೆ?
ಇಸ್ಲಾಮಿಕ್ ಸುಧಾರಣಾವಾದಿ ಸಂಘಟನೆಯಾದ ತಬ್ಲೀಘಿ ಜಮಾತ್ ಮಾರ್ಚ್ 13 ರಂದು ನಿಜಾಮುದ್ದೀನ್ನಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಇದರಲ್ಲಿ ಸ್ಥಳೀಯರು ಸೇರಿದಂತೆ ಇಂಡೋನೇಶಿಯಾ, ಸೌದಿ ಅರೇಬಿಯಾ, ಕಿರ್ಗಿಸ್ತಾನ್ ಮತ್ತು ಮಲೇಶಿಯಾ ದೇಶಗಳಿಂದ ಬಂದಿದ್ದ ವಿದೇಶಿಯರು ಸೇರಿ 3,000 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಆದರೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ 1000 ಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ.