ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವನ್ನು ಬಾಲ್ಟಿಕ್ ದೇಶಗಳಲ್ಲೊಂದಾದ ಈಸ್ಟೋನಿಯಾ ಮೇ ತಿಂಗಳಿನಿಂದ ವಹಿಸಿಕೊಳ್ಳಲಿದೆ. ಶಾಶ್ವತ ಸದಸ್ಯ ಅಲ್ಲದ ಸದಸ್ಯ ದೇಶವಾಗಿ 2 ವರ್ಷಗಳ ಅವಧಿಗೆ (2020-22) ಆಯ್ಕೆಗೊಂಡ ಈಸ್ಟೋನಿಯಾ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ, "ಮುಕ್ತತೆ" ಹಾಗೂ "ಪಾರದರ್ಶಕತೆ"ಗೆ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಒತ್ತು ನೀಡಲಿದೆ ಎನ್ನುತ್ತಾರೆ ಭಾರತದಲ್ಲಿರುವ ಈಸ್ಟೋನಿಯಾ ರಾಯಭಾರಿ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಗೆ ನೀಡಿದ ಎಕ್ಲೂಸಿವ್ ಸಂದರ್ಶನದಲ್ಲಿ, ಈಸ್ಟೋನಿಯಾ ರಾಯಭಾರಿ ಕತ್ರಿನ್ ಕಿವಿ ಈ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಈಸ್ಟೋನಿಯಾ ಕೋವಿಡ್- 19ರ ಬಗ್ಗೆ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗಬೇಕೆಂಬ ಪ್ರಸ್ತಾಪವನ್ನು ಬಹಳ ಪ್ರಬಲವಾಗಿ ಮಂಡಿಸುತ್ತಿತ್ತು. ಅಂತಿಮವಾಗಿ ಮಾರ್ಚ್‍ನಲ್ಲಿ ನಡೆದ ಸಭೆಯಲ್ಲಿ, ಡೊಮಿಕನ್ ರಿಪಬ್ಲಿಕ್‍ನ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ವರದಿಗಳ ಪ್ರಕಾರ, ಈ ಸಭೆ ಅಪೂರ್ಣವಾಗಿ ಉಳಿಯಿತು. ಸಭೆಯಲ್ಲಿ ಅಮೇರಿಕ, ಚೀನಾವನ್ನು ತರಾಟೆಗೆ ತೆಗೆದುಕೊಂಡು ಕೋವಿಡ್-19ಗೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಪಾಡಿಕೊಳ್ಳುವುದರ ಜತೆಗೆ ಸಾರ್ವಜನಿಕ ದತ್ತಾಂಶಗಳನ್ನು ಹಂಚಿಕೊಳ್ಳುವಂತೆ ಆಗ್ರಹಿಸಿತು. ಸಭೆಯಲ್ಲಿ ಬೀಜಿಂಗ್ ಯಾರನ್ನೋ ಬಲಿಪಶುವಾಗಿಸುವುದರ ಬದಲು, ಜಾಗತಿಕ ಸಹಕಾರದೊಂದಿಗೆ ಕೋವಿಡ್-19 ವಿರುದ್ಧ ಹೋರಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
"ಮೇ ತಿಂಗಳಿನಲ್ಲಿ ನಾವು ಖಂಡಿತವಾಗಿ ಕೋವಿಡ್-19 ವಿಪತ್ತು ವಿಷಯವನ್ನು ಪ್ರಸ್ತಾಪಿಸಲಿದ್ದೇವೆ. ನಾವು ಈ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ ಎಲ್ಲಾ ದೇಶಗಳನ್ನು ಕೋರುತ್ತೇವೆ. ಏಕೆಂದರೆ, ಈ ಹಂತದಲ್ಲಿ, ನಮಗೆ ಸಂಪೂರ್ಣ ಚಿತ್ರಣ ದೊರಕಿಲ್ಲ. ಈ ಕಾರಣದಿಂದಲೇ ಈ ಹಂತದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಬಗೆಗಿನ ವಿಚಾರಗಳಲ್ಲಿ ನಾವು ತುಂಬಾ ಸೂಕ್ಷ್ಮವಾಗಿರಬೇಕು ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಈ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹಬ್ಬಲು ಆರಂಭವಾದ ಬಳಿಕ ಸೈಬರ್ ಆಕ್ರಮಣಗಳ ಸಂಖ್ಯೆ ಕೂಡಾ ಹೆಚ್ಚಿದೆ," ಎಂದು ಅವರು ತಿಳಿಸಿದರು.
ಮೇ22ರಂದು, ಈಸ್ಟೋನಿಯ ಪ್ರಧಾನಿ ವಿಶ್ವ ಭದ್ರತಾ ಮಂಡಳಿಯ ಅನೌಪಚಾರಿಕ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆ ನಮ್ಮ ನಡುವಣ ಹಿತಾಸಕ್ತಿಗಳನ್ನು ಬಗೆಹರಿಸುವುದು ಹಾಗೂ ಸೈಬರ್ ಸುರಕ್ಷತೆ ಮೇಲಿನದಾಗಿರುತ್ತದೆ. ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಈ ಸಭೆ ಮುಕ್ತವಾಗಿರುತ್ತದೆ. ವಿಶ್ವಸಂಸ್ಥೆ ಸಭೆಯ ನಡಾವಳಿಗಳ ಬಗ್ಗೆ ಈಗಾಗಲೆ ಈಸ್ಟೋನಿಯಾದ ವಿದೇಶಾಂಗ ಸಚಿವರು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆಗೆ ಚರ್ಚಿಸಿದ್ದಾರೆ.
ಚೀನಾ ಪರ ವಾಲಿದ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ತನ್ನ ಹಣಕಾಸು ನೆರವನ್ನು ಹಿಂತೆಗೆದುಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ, ಈ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಹಾಗೂ ಪರಸ್ಪರ ದೂಷಣೆಯಲ್ಲಿ ಸಮಯ ಹಾಗೂ ಶಕ್ತಿಯನ್ನು ವ್ಯಯಿಸಬಾರದು ಎಂದು ಅವರು ತಿಳಿಸಿದರು.