ಲಖನೌ(ಉತ್ತರ ಪ್ರದೇಶ): ತರಕಾರಿ, ಹಾಲು, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಜನರ ಮನೆಗಳಿಗೆ ತಲುಪಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
'ಉತ್ತರ ಪ್ರದೇಶದ 23 ಕೋಟಿ ಜನರಿಗೆ ತರಕಾರಿಗಳು, ಹಾಲು, ಔಷಧಿಗಳಂತಹ ಅಗತ್ಯ ವಸ್ತುಗಳ ಸಂಗ್ರಹ ಸಾಕಷ್ಟಿದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ನಿಮ್ಮ ಮನೆಗಳಿಂದ ಹೊರಹೋಗಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
'ಇಂದಿನಿಂದ ತರಕಾರಿಗಳು, ಹಾಲು, ಹಣ್ಣುಗಳು, ಔಷಧಿಗಳು ಮತ್ತು ಇತರ ಅಗತ್ಯ ಸರಕುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು, ಇದಕ್ಕಾಗಿ ನಾವು 10,000 ಕ್ಕೂ ಹೆಚ್ಚು ವಾಹನಗಳನ್ನು ಗುರುತಿಸಿದ್ದೇವೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗದಂತೆ ಮನವಿ ಮಾಡುತ್ತೇನೆ' ಎಂದಿದ್ದಾರೆ.
ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ಹರಡುವುದನ್ನು ಎದುರಿಸಲು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಈ ಸರ್ವವ್ಯಾಪಿ ರೋಗವನ್ನು ಎದುರಿಸಲು 'ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಏಕೈಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸುಮಾರು 536 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.