ಹೈದರಾಬಾದ್:ದೇಶದಲ್ಲಿ ಕೃಷಿ ಕಾರ್ಮಿಕರಿಗೆ ತಮ್ಮ ಹಳ್ಳಿಗಳಲ್ಲೇ ವರ್ಷಕ್ಕೆ ನೂರು ದಿನಗಳ ಕಾಲ ಜೀವನೋಪಾಯಕ್ಕಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ 14 ವರ್ಷಗಳ ಹಿಂದೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಲಾಯಿತು. ಮಹಾಮಾರಿ ಕೊರೋನಾ ವೈರಸ್ ಭೀಕರ ದಾಳಿ ಮತ್ತು ಇದರಿಂದಾದ ಲಾಕ್‌ಡೌನ್ ಹೊಡೆತದಿಂದ ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿರುವ ವಲಸೆ ಕಾರ್ಮಿಕರಿಗೆ ಜೀವನೋಪಾಯಕ್ಕೆ ಉಳಿದಿರುವ ಏಕೈಕ ಭರವಸೆ ಮತ್ತು ಮಾರ್ಗ ಉದ್ಯೋಗ ಖಾತ್ರಿ ಯೋಜನೆಯಾಗಿದೆ.
ಈ ರೀತಿ ಹೀನಾಯವಾಗಿ ಉದ್ಯೋಗ ವಂಚಿತರಾಗಿ ಗ್ರಾಮಗಳಿಗೆ ಹಿಂದಿರುಗಿರುವ ಕಾರ್ಮಿಕರ ಪೈಕಿ ಕೈಯಲ್ಲಿ ನೂರು ರೂಪಾಯಿಗಳು ಇಲ್ಲದೆ ಗ್ರಾಮಗಳಿಗೆ ಹಿಂದಿರುಗಿದ ದುರದೃಷ್ಟವಂತ ಒಟ್ಟು ವಲಸೆ ಕಾರ್ಮಿಕರ ಸಂಖ್ಯೆ 64% ರಷ್ಟಿದೆ. ಲಾಕ್‌ಡೌನ್ ಹೇರಿದ ನಂತರ 90 ಪ್ರತಿಶತದಷ್ಟು ಕಾರ್ಮಿಕರಿಗೆ ತಮ್ಮ ಕೆಲಸದ ಅವಧಿಗೆ ಯಾವುದೇ ರೀತಿಯ ವೇತನವನ್ನು ನೀಡಲಾಗಿಲ್ಲ. ಹೀಗಾಗಿ, ಅವರ ಜೀವನ ಪರಿಸ್ಥಿತಿ ನಿಜವಾಗಿಯೂ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿಯೇ, ಮನೆಗೆ ಮರಳುತ್ತಿರುವ ವಲಸೆ ಕಾರ್ಮಿಕರ ಪೈಕಿ ಉದ್ಯೋಗ ಖಾತರಿ ಯೋಜನೆಯ ಸಹಾಯ ಪಡೆದು ಹೊಸ ಜೀವನದ ಆರಂಭ ಮಾಡಲು ಪ್ರಯತ್ನಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಒಂಬತ್ತು ಕೋಟಿ ವಲಸೆ ಕಾರ್ಮಿಕರು ಕೆಲಸವನ್ನು ನಿರೀಕ್ಷಿಸಿದರೆ, ಕೇವಲ 7.5 ಕೋಟಿ ಜನರಿಗೆ ಮಾತ್ರ ಕೆಲಸವನ್ನು ಒದಗಿಸಲು ಸಾಧ್ಯವಾಯಿತು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದೂ ವರ್ಷಕ್ಕೆ ಸರಾಸರಿ 46 ದಿನಗಳು ಉದ್ಯೋಗ ಮಾತ್ರ! ಇನ್ನೂ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಈ ತಿಂಗಳಲ್ಲಿ ಉದ್ಯೋಗ ಅರಸಿದ 4.33 ಕೋಟಿ ಜನರಲ್ಲಿ ಕೇವಲ 50 ಪ್ರತಿಶತದಷ್ಟು ಜನರಿಗೆ ಮಾತ್ರ ಕೆಲಸ ಸಿಗುತ್ತದೆ ಎಂಬುದು ಸ್ಪಷ್ಟವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಮುಂದಿನ ಕೆಲವು ಸಮಯದವರೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
2019-20ರ ಪರಿಷ್ಕೃತ ಅಂದಾಜಿನ ಪ್ರಕಾರ, ಉದ್ಯೋಗ ಖಾತರಿ ಯೋಜನೆಗೆ ಸುಮಾರು 71,000 ಕೋಟಿ ರೂ. ವೆಚ್ಚವಾಗಲಿದೆ. ಆದರೆ, ಇತ್ತೀಚಿನ ಬಜೆಟ್‌ನಲ್ಲಿ ಇಅದನ್ನು 10,000 ಕೋಟಿಗಳಷ್ಟು ಮೊಟಕುಗೊಳಿಸಿದ್ದ ಕೇಂದ್ರವು 'ಆತ್ಮ ನಿರ್ಭರ್ ಭಾರತ್ ಅಭಿಯಾನ್' ಯೋಜನೆಯಡಿ 40,000 ಕೋಟಿಗೆ ಏರಿಸಿದೆ. ಇದೀಗ, ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದ ಕೇಂದ್ರದ ಉದ್ಯೋಗ ಖಾತರಿ ಖಾತೆಯಲ್ಲಿ 300 ಕೋಟಿ ಕೆಲಸದ ದಿನಗಳವರೆಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಕೇಂದ್ರವು ಲೆಕ್ಕ ಹಾಕಿದೆ. ಹೆಚ್ಚುತ್ತಿರುವ ಉದ್ಯೋಗ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು. ಈ ಸಂಕಷ್ಟದ ಅಸಾಮಾನ್ಯ ಸಂದರ್ಭಗಳಲ್ಲಿ, ಸರ್ಕಾರವು ಬಜೆಟ್ ಮಿತಿಗಳನ್ನು ಬದಿಗಿಟ್ಟು ಉದ್ಯೋಗ ನಷ್ಟದಿಂದ ಬಳಲುತ್ತಿರುವ ಈ ನಿರ್ಗತಿಕ ವಲಸೆ ಕಾರ್ಮಿಕರಿಗೆ ಸಹಾಯ ಮಾಡಬೇಕು ಮತ್ತು ಕರೋನಾದಿಂದ ಸಂಕಷ್ಟಕ್ಕೆ ತುತ್ತಾಗಿರುವ ಕಾರ್ಮಿಕರ ಬದುಕು ಕಟ್ಟಬೇಕು.