ನವದೆಹಲಿ: ಲಾಕ್ಡೌನ್ನ ಅವಧಿಯಲ್ಲಿ ವರ್ಕ್ ಪ್ರಂ ಹೋಂ ಮಾಡುವವರು ಕೆಲ ಮಟ್ಟಿಗೆ ಅದರಲ್ಲಿ ಬ್ಯುಸಿ ಆಗಿದ್ದಾರೆ. ಅದನ್ನು ಹೊರತುಪಡಿಸಿದರೆ ಮನೆಯಿಂದ ಕೆಲಸ ಮಾಡುವವರಾಗಲಿ ಅಥವಾ ಸುಮ್ಮನೇ ಮನೆಯಲ್ಲಿ ಕುಳಿತಿರುವವರಾಗಲಿ ಎಲ್ಲರಿಗೂ ಕೊರೊನಾ ವೈರಸ್ನದ್ದೇ ಜಪವಾಗಿದೆ. ಸುದ್ದಿ ವಾಹಿನಿಗಳು, ನ್ಯೂಸ್ ಪೋರ್ಟಲ್ಗಳು ಹೀಗೆ ಎಲ್ಲೆಡೆ ಕೊರೊನಾ ಆವರಿಸಿಕೊಂಡಿದೆ. ಕೊರೊನಾ ಕರ್ವ್ ಹೇಗೆ ಮುನ್ನಡೆಯುತ್ತಿದೆ, ಇನ್ನಷ್ಟು ಕೇಸ್ಗಳಾದಲ್ಲಿ ಲಾಕ್ಡೌನ್ ಮತ್ತೆ ಮುಂದುವರೆಯುವುದಾ ಬರೀ ಇಂಥವೇ ಪ್ರಶ್ನೆಗಳು ಜನರ ಮನಸ್ಸನ್ನು ಇನ್ನಿಲ್ಲದಂತೆ ಕೊರೆಯುತ್ತಿವೆ.
ವೈಯಕ್ತಿಕ ಹಾಗೂ ಸಾಮಾಜಿಕ ಅನಿಶ್ಚಿತತೆಗಳು ಜನರ ಮನಸ್ಸಿನಲ್ಲಿ ಒತ್ತಡ, ಆತಂಕ ಹಾಗೂ ಭಯದ ವಾತಾವರಣ ಉಂಟು ಮಾಡುತ್ತಿವೆ. ಹಾಗಾದರೆ ಇದರಿಂದ ಪಾರಾಗುವ ದಾರಿ ಯಾವುದಾದರೂ ಇದೆಯಾ? ಕೊರೊನಾ ಬಗ್ಗೆ ಓದುವುದು, ನೋಡುವುದು ಹಾಗೂ ತಿಳಿದುಕೊಳ್ಳುವುದನ್ನು ಸಂಪೂರ್ಣ ಬಿಟ್ಟು ಬಿಡಬೇಕಾ ಅಥವಾ ಎಷ್ಟು ತಿಳಿದುಕೊಳ್ಳಬೇಕೆಂದು ನಿರ್ಧರಿಸಬೇಕಾ ಎಂಬೆಲ್ಲ ವಿಷಯಗಳ ಬಗ್ಗೆ ತಿಳಿಯೋಣ.
"ಕ್ರಿಕೆಟ್ ಸ್ಕೋರ್ ನೋಡುವ ಹಾಗೆ ಕೋವಿಡ್-19 ಸುದ್ದಿಗಳನ್ನು ನಿರಂತರವಾಗಿ ನೋಡುವ ಅವಶ್ಯಕತೆ ಇಲ್ಲ. ದಿನಕ್ಕೊಂದು ಬಾರಿ ಅಥವಾ ಹೆಚ್ಚೆಂದರೆ ಎರಡು ಬಾರಿ ಸುದ್ದಿ ನೋಡಿದರೆ ಸಾಕು. ಮಾಧ್ಯಮಗಳಲ್ಲಿ ಕೊರೊನಾ ಕುರಿತಂತೆ ಸಾಕಷ್ಟು ಸಕಾರಾತ್ಮಕ ಸುದ್ದಿಗಳನ್ನೂ ತೋರಿಸಲಾಗುತ್ತಿದೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಯ ಬಗೆಗೂ ಮಾಧ್ಯಮಗಳು ತೋರಿಸುತ್ತಿವೆ. ಸಮಾಜದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತಿವೆ. ಅಂದರೆ ವಿಷಯವೊಂದನ್ನು ನಾವು ಯಾವ ದೃಷ್ಟಿಕೋನದಲ್ಲಿ ಗ್ರಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ." ಎನ್ನುತ್ತಾರೆ ಹೈದರಾಬಾದನಲ್ಲಿರುವ ಟ್ರಾಂಕ್ವಿಲ್ ಮೈಂಡ್ಸ್ ಸಂಸ್ಥೆಯ ಮನೋರೋಗ ತಜ್ಞ ಡಾ. ಪ್ರವೀಣ ಕುಮಾರ ಚಿಂತನಪಂತಿ.