ವರಂಗಲ್(ತೆಲಂಗಾಣ):24 ವರ್ಷದ ಯುವತಿ ಮೇಲೆ 9 ಮಂದಿ ಕಾಮುಕರ ಗುಂಪೊಂದು ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ಮಹಬೂಬಾದ್ನಲ್ಲಿ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಎಂಟು ಮಂದಿ ದುಷ್ಕರ್ಮಿಗಳ ಬಂಧನ ಮಾಡಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಕೋಥಗುಡೆಮ್ ಜಿಲ್ಲೆಯಿಂದ ಹೈದರಾಬಾದ್ನ ಮೊಹಬೂಬಾದ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ, ಆಕೆಯ ಬಳಿ ಅಮಾನುಗಲ್ ಗ್ರಾಮಕ್ಕೆ ತೆರಳಲು ಬೇಕಾದಷ್ಟು ಹಣದ ಕೊರತೆ ಇದ್ದ ಕಾರಣ, ಪರಿಚಯಸ್ಥರಿಗೆ ಕಾಲ್ ಮಾಡಿ ಹಣ ನೀಡುವಂತೆ ಕೇಳಿಕೊಂಡಿದ್ದಾಳೆ.
ಈ ವೇಳೆ, ಆಕೆಯನ್ನ ಕರೆದುಕೊಂಡು ಹೋಗಲು ಆಟೋದಲ್ಲಿ ಆಗಮಿಸಿದ್ದ ವ್ಯಕ್ತಿ, ಮಾವಿನ ತೋಪಿಗೆ ಕರೆದೊಯ್ದು ಸ್ನೇಹಿತರು ಹಾಗೂ ಆಟೋ ಡ್ರೈವರ್ ಸೇರಿದಂತೆ ಇತರರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನ ನೋಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅವರು ತಲುಪುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.
ಸಂತ್ರಸ್ತೆ ತಂದೆ ನೀಡಿರುವ ದೂರಿನನ್ವಯ ಎಂಟು ಮಂದಿಯನ್ನ ಈಗಾಗಲೇ ಬಂಧನ ಮಾಡಲಾಗಿದ್ದು, ಉಳಿದ ಓರ್ವನಿಗೆ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.