ನವದೆಹಲಿ:ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370ನೇ ವಿಧಿಗೆ ಕೇಂದ್ರ ಸರ್ಕಾರ ಇತಿಶ್ರೀ ಹಾಡಿರುವ ಬೆನ್ನಲ್ಲೇ ಗೂಗಲ್ನಲ್ಲಿ ಕಾಶ್ಮೀರದ ಯುವತಿಯರಿಗಾಗಿ ಹುಡುಕಾಟವೂ ಹೆಚ್ಚಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪುರುಷರು ಕಾಶ್ಮೀರಿ ಯುವತಿಯರನ್ನು ಮದುವೆಯಾಗಲು ಘೋಷಿಸಿಕೊಂಡಿದ್ದು, ಈ ಕುರಿತ ಫೋಟೋ ಹಾಗೂ ವಿಡಿಯೋಗಳು ಈಗ ಸಖತ್ ವೈರಲ್ ಆಗುತ್ತಿವೆ. ಅವರೆಲ್ಲರೂ “ಈಗ ಕಾಶ್ಮೀರದಿಂದ ಹುಡುಗಿಯರನ್ನು ಪಡೆಯಬಹುದು” ಎಂದು ಟ್ವೀಟ್ ಮಾಡುತ್ತಿದ್ದಾರೆ.
ಗೂಗಲ್ ಟ್ರೆಂಡ್ಸ್ನ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ “Kashmiri girls” ಎಂದು ಹುಡುಕಿದವರಲ್ಲಿ ದಕ್ಷಿಣ ಭಾರತದ ಕೇರಳ ರಾಜ್ಯದ ಪುರುಷರು ಅಗ್ರಸ್ಥಾನದಲ್ಲಿದ್ದಾರೆ. ಜಾರ್ಖಾಂಡ್ ಎರಡನೇ ಸ್ಥಾನದಲ್ಲಿದ್ದರೆ, ಹಿಮಾಚಲ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಇನ್ನು ಅಗಸ್ಟ್ 6 ರಿಂದ “marry Kashmiri girl” ಎಂದೂ ಗೂಗಲ್ನಲ್ಲಿ ಹುಡುಕಾಟ ಪ್ರಾರಂಭವಾಗಿದ್ದು, ಈ ಪೈಕಿ ನವದೆಹಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಎರಡನೇ ಹಾಗೂ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಇಷ್ಟೇ ಅಲ್ಲದೇ “ಕಾಶ್ಮೀರದಲ್ಲಿ ಭೂಮಿ ಖರೀದಿ” ಎಂದು ಜಾರ್ಖಾಂಡ್, ನವದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿನ ಜನ ಹೆಚ್ಚು ಹುಡುಕಿದ್ದರೆ, “ಕಾಶ್ಮೀರದಲ್ಲಿ ಭೂಮಿ ಖರೀದಿಸುವುದು ಹೇಗೆ” ಎಂದು ಹುಡುಕಿದವರಲ್ಲಿ ಹರಿಯಾಣದ ಜನರೇ ಅಗ್ರಸ್ಥಾನದಲ್ಲಿದ್ದಾರೆ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿವೆ. ಇನ್ನು ನವದೆಹಲಿಯ ಜನರು ಲಡಾಖ್ನಲ್ಲಿ ಭೂಮಿ ಖರೀದಿಸಲು ಹೆಚ್ಚು ಆಸಕ್ತಿ ಹೊಂದಿರುವ ಅಂಶಗಳು ಬೆಳಕಿಗೆ ಬಂದಿದೆ.
ಒಟ್ಟಾರೆ ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ನೇ ವಿಧಿ ರದ್ದಾಗಿದ್ದು, ಕಾಶ್ಮೀರದ ಹೆಣ್ಣು-ಮಣ್ಣಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿರುವುದೇ ಅಚ್ಚರಿ ತರಿಸಿದೆ.