ಹೈದರಾಬಾದ್: 2018ರಲ್ಲಿ ಉಂಟಾದ ಭೀಕರ ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದ ಕೇರಳದ ಪ್ರವಾಹ ಸಂತ್ರಸ್ತರಿಗಾಗಿ ಹೈದರಾಬಾದ್ನ ಈನಾಡು-ರಾಮೋಜಿ ಸಂಸ್ಥೆಯು 121 ಮನೆಗಳನ್ನು ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಮನೆಗಳನ್ನು ಇಂದು ಸಂತ್ರಸ್ತರಿಗೆ ಹಸ್ತಾಂತರಿಸಲಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.
ಅದು 2018ರ ಆಗಸ್ಟ್ ತಿಂಗಳು. ಜಾಗತಿಕ ತಾಪಮಾನದಿಂದ ಪ್ರಕೃತಿ ಮುನಿಸಿಕೊಂಡು ತನ್ನ ರೌದ್ರಾವತಾರವನ್ನೇ ತೋರಿಸಿತ್ತು. ಪರಿಣಾಮ ಅಲಪ್ಪುಜ್ಹದಲ್ಲಿ ಅಪಾರ ಪ್ರಮಾಣದ ಕಷ್ಟನಷ್ಟ ಉಂಟಾಗಿತ್ತು. ಮನೆಮಠಗಳನ್ನು ಕಳೆದುಕೊಂಡ ಜನಸಾಮಾನ್ಯರ ಬದುಕು ಅಕ್ಷರಶ: ಬೀದಿಗೆ ಬಂದಿತ್ತು. ಅಂದು ಬೀದಿಗೆ ಬಿದ್ದು ಚೂರು ಆಶ್ರಯಕ್ಕಾಗಿ ಪರದಾಡಿದ ಸಾವಿರಾರು ಕುಟುಂಬಗಳ ಪರಿಸ್ಥಿತಿ ಈಗಲೂ ಭಿನ್ನವಾಗಿಲ್ಲ. ಬದುಕು ಮೂರಾಬಟ್ಟೆ ಆಯಿತಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಅಸಹಾಯಕ ಜನರ ನೆರವಿಗೆ ಬಂದಿದ್ದು ಹೈದರಾಬಾದ್ನ ಈನಾಡು-ರಾಮೋಜಿ ಸಂಸ್ಥೆ. ಪ್ರವಾಹ ಸಂತ್ರಸ್ತರಿಗೆ ಮಾನಸಿಕ ಧೈರ್ಯ ತುಂಬಿದ್ದಲ್ಲದೆ, 121 ಮನೆಗಳನ್ನು ನಿರ್ಮಿಸಿಕೊಟ್ಟು ಬದುಕಿನಲ್ಲಿ ನಂಬಿಕೆ ಕಳೆದುಕೊಂಡ ಜನರ ಮೊಗದಲ್ಲಿ ಮಂದಹಾಸ ಮರುಸ್ಥಾಪಿಸುವಲ್ಲಿ ರಾಮೋಜಿ ಸಂಸ್ಥೆ ಯಶಸ್ವಿಯಾಯ್ತು.
ರಾಮೋಜಿ ಗ್ರೂಪ್ ಕೇರಳದ ಕುಡುಂಬಶ್ರೀ ಭಾಗದ ಮಹಿಳೆಯರ ಸ್ವಸಹಾಯ ಗುಂಪು ಮತ್ತು 'ಐ ಆಮ್ ಫಾರ್ ಅಲೆಪ್ಪಿ' ಕಾರ್ಯಕ್ರಮಗಳ ಸಹಕಾರದೊಂದಿಗೆ 121 ಮನೆಗಳನ್ನು ಕಟ್ಟಿಸಿಕೊಟ್ಟಿದೆ. ಈ ಮೂಲಕ ಕೇರಳ ಸರ್ಕಾರದ ವಸತಿ ಯೋಜನೆ ಹೊರತುಪಡಿಸಿ ಪ್ರವಾಹ ಪೀಡಿತರಿಗೆ ಮನೆ ಹಂಚುತ್ತಿರುವ ಎರಡನೇ ದೊಡ್ಡ ವಸತಿ ಯೋಜನೆ ಎಂಬ ಶ್ರೇಯಸ್ಸಿಗೂ ರಾಮೋಜಿ ಗ್ರೂಪ್ ಪಾತ್ರವಾಯಿತು. ಮನೆಗಳ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಕುಡುಂಬಶ್ರೀ ಯೋಜನೆಯ ಕಟ್ಟಡ ನಿರ್ಮಾಣ ವಿಭಾಗಕ್ಕೆ ಮನೆಗಳನ್ನು ನಿರ್ಮಿಸಲು ಒಂದು ವರ್ಷದ ಗಡುವು ನೀಡಲಾಗಿತ್ತು. ಆದರೆ, ಕೇವಲ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಂತ್ರಸ್ತರ ಆಶ್ರಯಕ್ಕೆ ನೆರವಾಗಿದ್ದು ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ.