ಭೂಮಿ ಅವನತಿ ಹೊಂದುತ್ತಿರುವ ಸಂಕಷ್ಟವನ್ನು ಭಾರತ ಈಗ ಎದುರಿಸುತ್ತಿದೆ. ಅರಣ್ಯ ನಾಶ, ಅತಿಯಾದ ಸಾಗುವಳಿ, ಮಣ್ಣಿನ ಸವಕಳಿ ಹಾಗೂ ಜಲಮೂಲ ಪ್ರದೇಶದ ಕುಸಿತದಂತಹ ನಾನಾ ಕಾರಣಗಳಿಂದಾಗಿ ದೇಶದ ಒಟ್ಟು ಭೂ ಪ್ರದೇಶದ (960 ಲಕ್ಷ ಹೆಕ್ಟೇರ್) ಪೈಕಿ ಶೇಕಡಾ 30ರಷ್ಟು ಭೂಮಿ ಈಗಾಗಲೇ ಅವನತಿ ಹೊಂದಿದೆ. ಭೂಮಿಯ ಉತ್ಪಾದಕತೆಯ ನಾಶದಿಂದ ಉಂಟಾಗುತ್ತಿರುವ ಇಳುವರಿ ಕುಸಿತದಿಂದ ಪ್ರತಿ ವರ್ಷ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 2.5ರಷ್ಟು ಪಾಲು ಈಗಾಗಲೇ ಕಬಳಿಕೆಯಾಗತೊಡಗಿದೆ. ಅಷ್ಟೇ ಅಲ್ಲ, ದೇಶಾದ್ಯಂತ ತಾಪಮಾನ ಬದಲಾವಣೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದರಿಂದ ಭೂಮಿಯ ಉತ್ಪಾದಕತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿಯತೊಡಗಿದೆ.
ತಾಪಮಾನ ಏರಿಕೆ ತಡೆಯುವ ಪರಿಹಾರ ಘಟಕಗಳ ಪೈಕಿ ಅರಣ್ಯಗಳು ಬಹಳ ಮುಖ್ಯ. ಆದರೆ, 2018ರವರೆಗಿನ ಲೆಕ್ಕಾಚಾರದ ಪ್ರಕಾರ, ಕಳೆದ 18 ವರ್ಷಗಳಲ್ಲಿ 16 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಭಾರತ ಕಳೆದುಕೊಂಡಿದೆ. 2015ರವರೆಗಿನ ಲೆಕ್ಕಾಚಾರದಂತೆ, ಐದು ವರ್ಷಗಳ ಅವಧಿಯಲ್ಲಿ,100 ಲಕ್ಷ ಮರಗಳನ್ನು ಕಡಿಯಲು ಸರಕಾರ ಅವಕಾಶ ನೀಡಿದೆ. ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ನ್ಯಾಶನಲ್ ಡೆಮಾಕ್ರಟಿಕ್ ಅಲೈಯನ್ಸ್ – ಎನ್‌ಡಿಎ) ಸರಕಾರದ ಮೊದಲ ಅವಧಿಯ ನಾಲ್ಕು ವರ್ಷಗಳಲ್ಲಿ, ಅಂದರೆ ಜೂನ್ 2014 ಮತ್ತು ಮೇ 2018ರ ಒಳಗೆ, ದೇಶದ ರಕ್ಷಿತ ಪ್ರದೇಶಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ 500ಕ್ಕೂ ಹೆಚ್ಚು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿದೆ. ಇದಕ್ಕೆ ಹೋಲಿಸಿದಲ್ಲಿ, ಹಿಂದಿನ ಅವಧಿಯಲ್ಲಿದ್ದ ಪ್ರಗತಿಪರ ಮೈತ್ರಿ ಒಕ್ಕೂಟ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ - ಯುಪಿಎ) ಸರಕಾರವು 2009 ಮತ್ತು 2013ರ ಅವಧಿಯಲ್ಲಿ ಕೇವಲ 260 ಯೋಜನೆಗಳಿಗೆ ಅನುಮತಿ ನೀಡಿತ್ತು.
ಪರಿಸ್ಥಿತಿ ಇದೇ ಮಾದರಿಯಲ್ಲಿ ಮುಂದುವರಿದ್ದೇ ಆದಲ್ಲಿ, ಸಣ್ಣ ಮತ್ತು ಮಧ್ಯಮ ರೈತರನ್ನು ಒಳಗೊಂಡಿರುವ ದೇಶದ ಶೇಕಡಾ 80ರಷ್ಟು ರೈತ ಸಮುದಾಯ, ನಿಕಟ ಭವಿಷ್ಯದಲ್ಲಿ ತೀವ್ರ ಸಂಕಷ್ಟವನ್ನು ಎದುರಿಸಲಿದೆ. ವಿಶ್ವ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಜಗತ್ತಿನ ಅತ್ಯಧಿಕ ಪ್ರಮಾಣದಲ್ಲಿ ಹಾಲು, ಬೇಳೆಕಾಳುಗಳು ಮತ್ತು ಸೆಣಬು ಉತ್ಪಾದಿಸುವ ಹಾಗು ಭತ್ತ, ಗೋದಿ, ಕಬ್ಬು, ಶೇಂಗಾ, ತರಕಾರಿಗಳು, ಹಣ್ಣು ಮತ್ತು ಹತ್ತಿ ಬೆಳೆಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ, ಕೃಷಿ ಆಧರಿತ ಆರ್ಥಿಕತೆ ಹೊಂದಿರುವ ದೇಶವಾಗಿರುವ ಭಾರತವು, ಆಹಾರ ಭದ್ರತೆ ಸಂಕಷ್ಟ ಎದುರಿಸಬೇಕಾದ ಅಪಾಯಕ್ಕೆ ಒಳಗಾಗಲಿದೆ. ಮಣ್ಣಿನ ಸವಕಳಿ ಹಾಗೂ ಅದರ ಕಾರಣವಾಗಿ ಉಂಟಾಗುವ ತಾಪಮಾನ ಬದಲಾವಣೆಯಿಂದಾಗಿ ಸಾಕು ಪ್ರಾಣಿಗಳ (ದನಕರು) ಬೆಳವಣಿಗೆ ಹಾಗೂ ಉತ್ಪಾದಕತೆಯ ಮೇಲೆ ಕೂಡಾ ಪರಿಣಾಮವಾಗಲಿದೆ. ಇದನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ತಾಪಮಾನ ಬದಲಾವಣೆ ಕುರಿತು ಅಧ್ಯಯನ ನಡೆಸುತ್ತಿರುವ ವಿಶ್ವಸಂಸ್ಥೆಯ ಅಂತರ್ ಸರಕಾರಗಳ ತಜ್ಞರ ಸಮಿತಿಯ ನಿಕಾಯವಾಗಿರುವ ಅಂತರ್ ಸರಕಾರಗಳ ತಜ್ಞರ ಸಮಿತಿ (ಐಪಿಸಿಸಿ) ಈ ಮಾಹಿತಿ ನೀಡಿದೆ.
ಅರಣ್ಯ ಪ್ರದೇಶ ಕುಸಿತದಿಂದಾಗಿ ತನ್ನ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ (ಜಿಡಿಪಿ) ಶೇಕಡಾ 1.4 ರಷ್ಟನ್ನು ಭಾರತ ಪ್ರತಿ ವರ್ಷ ಕಳೆದುಕೊಳ್ಳುತ್ತಿದೆ ಎನ್ನುತ್ತದೆ ದೆಹಲಿ ಮೂಲದ ಸರಕಾರೇತರ ಸಂಸ್ಥೆಯಾಗಿರುವ ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್‌ಟಿಟ್ಯೂಟ್‌ನ (ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ) ಅಧ್ಯಯನ. ತಾಪಮಾನ ಬದಲಾವಣೆಯಂತಹ ಗಂಭೀರ ವಿಷಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತದಂತಹ ಇತರ ಹಲವಾರು ದೇಶಗಳ ಭೂಮಿಗಳು, ಹದಗೆಡುತ್ತಿರುವ ಜಾಗತಿಕ ತಾಪಮಾನ ಏರಿಕೆಯ ಪ್ರಮುಖ ಅಂಶವಾಗಿರುವ ಹಸಿರುಮನೆ ಅನಿಲವಾದ ಇಂಗಾಲ ಡೈಆಕ್ಸೈಡ್ ಹೀರುವ ತಮ್ಮ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿವೆ. ಭೂಮಿಯ ಮೇಲಿನ 10 ಲಕ್ಷಕ್ಕೂ ಹೆಚ್ಚು ಜೀವಿಗಳು ಈಗಾಗಲೇ ವಿನಾಶದ ಅಂಚಿನಲ್ಲಿದ್ದು, ತಮ್ಮ ವಾಸಸ್ಥಳದ ನಷ್ಟ ಮತ್ತು ಭೂಮಿಯ ಅವನತಿಯಿಂದಾಗಿ ಜಾಗತಿಕ ಆಹಾರ ಭದ್ರತೆ ಮೇಲೆ ಬೆದರಿಕೆ ಉಂಟಾಗಿದೆ.
ಸ್ಥಳೀಯ ಪರಿಸರ ವ್ಯವಸ್ಥೆಯ ಕುರಿತು ತಿಳಿವಳಿಕೆ ಹೊಂದಿರುವ ಬುಡಕಟ್ಟು ಜನ ಮತ್ತು ಇತರ ಮೂಲನಿವಾಸಿಗಳು ಅರಣ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂಬುದು ಭಾರತ ಸರಕಾರಕ್ಕೆ ಅರಿವಾಗಿದೆ. ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಹಾಗೂ ಆಡಳಿತದಲ್ಲಿ ಅವರನ್ನು ಒಳಗೊಳ್ಳುವುದರಿಂದ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ನೆರವಾಗುತ್ತದೆ. ಮಣ್ಣಿನ ಸವಕಳಿಯಿಂದ ರಕ್ಷಣೆ ಹಾಗೂ ಅರಣ್ಯಗಳನ್ನು ಈ ಪ್ರಕ್ರಿಯೆ ಒಳಗೊಂಡಿರುವುದರಿಂದ, ತಾಪಮಾನ ಏರಿಕೆ ತಡೆ ಪ್ರಯತ್ನಗಳಿಗೆ ಇದು ಇಂಬು ಕೊಡಲಿದೆ.
2006ರಲ್ಲಿ ಅಂಗೀಕಾರವಾಗಿರುವ ಅರಣ್ಯಗಳ ಹಕ್ಕುಗಳ ಕಾಯಿದೆಯು ಹವಾಮಾನ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ಪರಿಣಾಮಕಾರಿ ಸಾಧನವಾಗುವ ಸಾಧ್ಯತೆಯಿದೆ. ಏಕೆಂದರೆ, ಬುಡಕಟ್ಟು ಜನರು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಲೆತಲಾಂತರದಿಂದ ಬಳಸುತ್ತಿರುವ ಅರಣ್ಯ ಪ್ರದೇಶ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವೇಶಿಸುವ, ನಿರ್ವಹಿಸುವ, ರಕ್ಷಿಸುವ ಹಾಗೂ ನಿಭಾಯಿಸುವ ಹಕ್ಕುಗಳನ್ನು ಈ ಕಾಯಿದೆಯು ಗುರುತಿಸುತ್ತದೆ.
ಆದರೆ, ಅರಣ್ಯಗಳ ಹಕ್ಕುಗಳ ಕಾಯಿದೆಯಡಿ ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆ ತೀರಾ ಮಂದಗತಿಯಲ್ಲಿದೆ. ದೇಶಾದ್ಯಂತ ಇರುವ 400 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ, 2009ರ ಏಪ್ರಿಲ್ 30ರವರೆಗೆ ಕೇವಲ 129.30 ಲಕ್ಷ ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ಹಕ್ಕುಗಳನ್ನು ಮಾತ್ರ ಇತ್ಯರ್ಥಪಡಿಸುವಲ್ಲಿ ಸರಕಾರ ಸಫಲವಾಗಿದೆ. ಅಲ್ಲದೇ, ಅರಣ್ಯಗಳ ಹಕ್ಕುಗಳ ಕಾಯಿದೆಯಡಿ ರದ್ದಾಗಿರುವ ಮನವಿಗಳಿಗೆ ಸಂಬಂಧಿಸಿದಂತೆ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳಿಂದಾಗಿ 20 ಲಕ್ಷ ಅರಣ್ಯವಾಸಿಗಳು ತಮ್ಮ ವಾಸಸ್ಥಳದಿಂದ ಹೊರದೂಡಲ್ಪಡುವ ಭೀತಿಗೆ ಸಿಲುಕಿದ್ದಾರೆ. ಹೀಗೆ ರದ್ದಾಗಿರುವ ಮನವಿಗಳನ್ನು ಮರುಪರಿಶೀಲಿಸುವ ಪ್ರಕ್ರಿಯೆಯನ್ನು 21 ರಾಜ್ಯ ಸರಕಾರಗಳು ಪ್ರಸ್ತುತ ಕೈಗೊಂಡಿವೆ.