ನವದೆಹಲಿ:ಸಂದೇಸರ ಸಹೋದರರ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಹಿರಿಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ನಿವಾಸಕ್ಕೆ ಇಂದು ಇಡಿ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಸಂದೇಸರ ಗ್ರೂಪ್ ಅಥವಾ ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‌ಬಿಎಲ್)ನಲ್ಲಿ ಸುಮಾರು 15 ಸಾವಿರ ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿತ್ತು. ಈ ಸಂಬಂಧ ಪಟೇಲ್ರಿಗೆ ಕೆಲ ಪ್ರಶ್ನೆಗಳನ್ನು ಕೇಳಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ಬಂದಿದ್ದಾರೆ.
ಅಹ್ಮದ್ ಪಟೇಲ್, ಗುಜರಾತ್ನ ರಾಜ್ಯಸಭಾ ಸಂಸದರಾಗಿದ್ದು, ದೆಹಲಿಯ ಮದರ್ ತೆರೇಸಾ ಕ್ರೆಸೆಂಟ್ನಲ್ಲಿ ವಾಸವಾಗಿದ್ದಾರೆ. ತನಗೆ 60 ವರ್ಷ ದಾಟಿದ್ದು, ಕೊರೊನಾಗೆ ತುತ್ತಾಗುವ ಅಪಾಯವಿದೆ ಎಂದು ಅನಾರೋಗ್ಯದ ಕಾರಣಗಳನ್ನು ಹೇಳಿ ಪಟೇಲ್ ಈ ಹಿಂದೆ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು.
ಇದಕ್ಕೂ ಮೊದಲು ಪಟೇಲ್ರ ಪುತ್ರ ಹಾಗೂ ಅಳಿಯನಿಗೆ ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ವೇಳೆ ಇವರು ನಿತಿನ್ ಸಂದೇಸರರ ಬಗ್ಗೆ ಗೊತ್ತಿರುವುದಾಗಿ ಒಪ್ಪಿಕೊಂಡಿದ್ದರು.
ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿ ನಡೆಸಿದ ಬಹುಕೋಟಿ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಕೇಸ್ ಸಂಬಂಧ ಸಂದೇಸರ ಸಹೋದರರಾದ ಚೇತನ್ ಮತ್ತು ನಿತಿನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.