ಮುಂಬೈ:ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಇದಕ್ಕೂ ಮೊದಲು ಡಿಸೆಂಬರ್ 11ರಂದು ಸಮನ್ಸ್ ನೀಡಿದ್ದು, ವರ್ಷಾ ರಾವತ್ ಆ ಸಮನ್ಸ್ಗೆ ಸ್ಪಂದನೆ ನೀಡಿರಲಿಲ್ಲ. ಇದರಿಂದಾಗಿ ಮತ್ತೆ ಈಗ ಸಮನ್ಸ್ ಎರಡನೇ ಬಾರಿ ಜಾರಿ ಮಾಡಲಾಗಿದ್ದು, ಡಿಸೆಂಬರ್ 29ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.
ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ಕೆಲವೊಂದು ದಾಖಲೆಗಳನ್ನು ಸಂಗ್ರಹಿಸುವ ಕಾರಣದಿಂದ ಅವರಿಗೆ ಸಮನ್ಸ್ ನೀಡಲಾಗಿದೆ. ಅವರು ವಿಚಾರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ:ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ನಾಳೆ ಮೋದಿ ಚಾಲನೆ
ಸಂಜಯ್ ರಾವತ್ ಪತ್ನಿಗೆ ಸಮನ್ಸ್ ನೀಡಿರುವ ವಿಚಾರ ಮಹಾರಾಷ್ಟ್ರದ ಮಹಾ ವಿಕಾಸ್ ಅಗಡಿ ಮೈತ್ರಿಕೂಟ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ತುಪ್ಪ ಸುರಿಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ಸರ್ಕಾರಿ ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ಇ.ಡಿಗಳನ್ನು ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಆಡಳಿತಾರೂಢ ನಾಯಕರ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಮಹಾ ವಿಕಾಸ್ ಅಗಡಿ ಆರೋಪ ಮಾಡಿತ್ತು.