ನವದೆಹಲಿ :ಲಾಕ್ಡೌನ್ ಸಮಯದಲ್ಲೂ ಡಿಹೆಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರು ತಮ್ಮ ತೋಟದ ಮನೆಗೆ ಪ್ರಯಾಣಿಸಲು ಬಳಸಿದ ಐದು ಐಷಾರಾಮಿ ವಾಹನಗಳನ್ನು ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆಕಾಯ್ದೆ (ಪಿಎಂಎಲ್ಎ) ಅಡಿ ಹೊರಡಿಸಲಾದ ಅಧಿಕೃತ ಆದೇಶವನ್ನು ಸತಾರಾ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ವಾಹನಗಳು ವಾಧವನ್ ಸಹೋದರರ ಒಡೆತನದಲ್ಲಿ ಇವೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಹೆಚ್‌ಎಫ್‌ಎಲ್) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾದಮನ್ ಅವರು ಯೆಸ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಇರುವ ತೋಟದ ಮನೆಗೆ ಹೋಗಲು ವಾಧವನ್ ಕುಟುಂಬಕ್ಕೆ ಅನುಮತಿ ನೀಡಿದ ಆರೋಪದಲ್ಲಿ ಗೃಹ ಸಚಿವಾಲಯದ ವಿಶೇಷ ಪ್ರಧಾನ ಕಾರ್ಯದರ್ಶಿ ಅಮಿತಾಭ್ ಗುಪ್ತಾ ಅವರನ್ನು ಈ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ವಾಧವನ್ ಸಹೋದರರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 21 ಮಂದಿ ಎರಡು ರೇಂಜ್ ರೋವರ್ ಮತ್ತು ಮೂರು ಟೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ಮೂಲಕ ಲಾಕ್ಡೌನ್ ಆದೇಶ ಉಲ್ಲಂಘಿಸಿದ್ದಾರೆ. ಹೀಗಾಗಿ 21 ಮಂದಿ ವಿರುದ್ಧವೂ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.