ನವದೆಹಲಿ :ಐಎನ್ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಪಾಸ್ವರ್ಡ್ ಇರುವ ಇ-ಚಾರ್ಜ್ ಶೀಟ್ ಅನ್ನು ಚಿದಂಬರ್ ವಿರುದ್ಧ ಸಲ್ಲಿಸಲಾಗಿದ್ದು, ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೊದಲ ಚಾರ್ಜ್‌ಶೀಟ್ ಇದಾಗಿದೆ.
ಈ ಚಾರ್ಜ್ಶೀಟ್ನಲ್ಲಿ ಚಿದಂಬರಂ, ಪುತ್ರ ಕಾರ್ತಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಎಸ್.ಎಸ್.ಭಾಸ್ಕರರಾಮನ್ ಮುಂತಾದವರ ಹೆಸರನ್ನು ಉಲ್ಲೇಖಿಸಲಾಗಿದೆ. ಸದ್ಯ ಇ- ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಲಾಗಿದ್ದು, ನ್ಯಾಯಾಲಯದ ಕಾರ್ಯಗಳು ಸಾಮಾನ್ಯ ಸ್ಥಿತಿಗೆ ಬಂದಾಗ ಮಾಮೂಲಿಯಂತೆ ಮುದ್ರಿತ ಪ್ರತಿ (ಹಾರ್ಡ್ ಕಾಪಿ)ಯಲ್ಲಿ ಚಾರ್ಜ್ ಶೀಟ್ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಪಿ.ಚಿದಂಬರಂ ಅನ್ನು ಹಿಂದಿನ ವರ್ಷ ಆಗಸ್ಟ್ 21ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದಿತ್ತು. ಅದೇ ವರ್ಷ ಅಕ್ಟೋಬರ್ 16ರಂದು ಜಾರಿ ನಿರ್ದೇಶನಾಲಯವೂ ಕೂಡಾ ಚಿದಂಬರಂ ಅನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಕೇಂದ್ರದ ಮಾಜಿ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದಾರೆ.