ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ, ದೇಶದ ಆರ್ಥಿಕತೆಯತ್ತ ಗಮನ ಹರಿಸುವ ಬದಲು ತನ್ನ ಸಾಮಾಜಿಕ ಮತ್ತು ರಾಜಕೀಯ ಈಡೇರಿಕೆಯತ್ತ ಹೆಚ್ಚು ಗಮನ ಹರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ಆರೋಪಿಸಿದರು.
ಸುದ್ದಿ ಸಂಸ್ಥೆಯೋದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅರ್ಥಶಾಸ್ತ್ರಜ್ಞ ರಾಜನ್, ಪ್ರಸ್ತುತ ಸರ್ಕಾರ, ದೊಡ್ಡ-ದೊಡ್ಡ ಚುನಾವಣೆಯ ಗೆಲುವಿನ ನಂತರವೂ ದೇಶದ ಆರ್ಥಿಕತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಆರ್ಥಿಕತೆಗಿಂತ ಹೆಚ್ಚಾಗಿ ತನ್ನ ರಾಜಕೀಯ ಮತ್ತು ಸಾಮಾಜಿಕ ಕಾರ್ಯಸೂಚಿಗಳನ್ನು ಪೂರೈಸುವಲ್ಲಿ ಹೆಚ್ಚು ಮಗ್ನವಾಗಿದೆ ಎಂದು ಟೀಕಿಸಿದರು.
ವಲಯವಾರು ಬೆಳವಣಿಗೆ ನಿಧಾನಗೊಳ್ಳುವುದು ಇನ್ನಷ್ಟುವೇಗವಾಗಿದೆ. ನೋಟುರದ್ದತಿ ಹಾಗೂ ಸೂಕ್ತ ಮುಂದಾಲೋಚನೆ ಇಲ್ಲದ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದ ಬಳಿಕ ಆರಂಭದಲ್ಲಿ ತೆಗೆದುಕೊಂಡ ಸುಧಾರಣೆಯ ಕೆಲವು ಕ್ರಮಗಳಿಂದಾಗಿ ಆರ್ಥಿಕತೆಯು ಸ್ವಲ್ಪ ಚುರುಕುಗೊಂಡಿತ್ತು. ಆದರೆ, ಹಣಕಾಸು ವಲಯವನ್ನು ಪರಿಣಾಮಕಾರಿಯಾಗಿ ಸಾಕಾರಗೊಳಿಸುವತ್ತ ಸರ್ಕಾರ ಗಮನ ಹರಿಸಿಲಿಲ್ಲ. ದುರದೃಷ್ಟವಶಾತ್ ಅದು ನಿಧಾನಗತಿಯ ಬೆಳವಣಿಗೆಗೆ ಕಾರಣವಾಯಿತು ಎಂದು ಹೇಳಿದರು.
ಈಗಲಾದರೂ ಇವುಗಳ ಬಗ್ಗೆ ಗಮನ ಹರಿಸಿದರೆ ಇಲ್ಲವೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಪರಿಸ್ಥಿತಿ ಬದಲಾಗಬಹುದು. ಪ್ರಸ್ತುತ, ಹಣಕಾಸು ಸಂಸ್ಥೆಗಳು ಸಾಲ ನೀಡುವಂತಹ ಸೀಮಿತ ಸಾಮರ್ಥ್ಯ ಹೊಂದಿವೆ. ತುಂಬಾ ಕಡಿಮೆ ಬಂಡವಾಳ ಹೊಂದಿರುವಂತಹ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕೇತರ ಹಣಕಾಸು ಕಂಪನಿಗಳು ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿವೆ ಎಂದು ರಾಜನ್ ಹೇಳಿದರು.