ನವದೆಹಲಿ: ರಾಜ್ಯಸಭೆಯ 6 ಸ್ಥಾನಗಳಿಗಾಗಿ ಜುಲೈ 5ರಂದು ಉಪಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.
ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಲೋಕಸಭೆ ಚುನಾವಣೆ ಬಳಿಕ ಲೋಕಸಭೆ ಪ್ರವೇಶಿಸಿ, ಕೇಂದ್ರ ಸಚಿವ ಸಂಪುಟ ಸೇರಿರುವುದರಿಂದ ಅವರ ಸ್ಥಾನ ತೆರವಾಗಿದೆ. ಒಟ್ಟಾರೆ 6 ಸ್ಥಾನಗಳಿಗೆ ಜುಲೈ 5ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರಬೀಳಲಿದೆ. ಈ ಸಂಬಂಧ ಜೂನ್ 18ಕ್ಕೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.
ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಅವರ ಸ್ಥಾನಗಳು ತೆರವಾಗಿದ್ದರಿಂದ ಗುಜರಾತ್ನಲ್ಲಿ ಎರಡೂ ಸ್ಥಾನಗಳಿಗೂ ಒಟ್ಟಿಗೆ ಮತದಾನ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿತ್ತು. ಎರಡು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆದರೆ ಆಡಳಿತಾರೂಢ ಬಿಜೆಪಿ ಗೆದ್ದುಬಿಡುತ್ತೆ ಎಂಬುದು ಕಾಂಗ್ರೆಸ್ನ ಲೆಕ್ಕಾಚಾರವಾಗಿತ್ತು. ಆದರೆ ಆಯೋಗ ಇದಕ್ಕೆ ಮಾನ್ಯತೆ ನೀಡಿಲ್ಲ.
ರಾಜ್ಯಸಭೆಯಲ್ಲಿ ರವಿಶಂಕರ್ ಪ್ರಸಾದ್ (ಬಿಹಾರ), ಅಚ್ಯುತಾನಂದ ಸಮಂತ (ಒಡಿಶಾ), ಪ್ರತಾಪ್ ಕೇಸರಿ ದೆಬ್ (ಒಡಿಶಾ), ಸೌಮ್ಯ ರಂಜನ್ ಪಟ್ನಾಯಕ್ (ಒಡಿಶಾ)ರ ಸ್ಥಾನಗಳು ತೆರವಾದ ಕಾರಣ ಉಪಚುನಾವಣೆ ನಡೆಸಲಾಗ್ತಿದೆ.