ಹೈದರಾಬಾದ್:ಪೂರ್ವ ಭಾರತದ ರಾಜ್ಯಗಳು ಬಾಂಗ್ಲಾದೇಶದ ಬಂದರುಗಳ ಪ್ರಯೋಜನ ಪಡೆದುಕೊಳ್ಳಬಹುದು, ಇದು ಎರಡೂ ದೇಶಗಳಿಗೆ ಲಾಭವಾಗಲಿದೆ ಎಂದು ಭಾರತಕ್ಕೆ ಭೇಟಿ ನೀಡಿರುವ ಬಾಂಗ್ಲಾದೇಶ ಮಾಹಿತಿ ಸಚಿವ ಮಹಮ್ಮದ್ ಹಸನ್ ಹೇಳಿದ್ದಾರೆ.
ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಹಮ್ಮದ್ ಹಸನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಜೊತೆಗಿನ ಸಭೆ, ಚಲನಚಿತ್ರಗಳು ಹಾಗೂ ನವಮಾಧ್ಯಮದ ಕುರಿತು ಮಾತನಾಡಿದರು.
ಈಟಿವಿ ಭಾರತ್ ಜೊತೆ ಬಾಂಗ್ಲಾದೇಶದ ಮಾಹಿತಿ ಸಚಿವ ಮಹಮ್ಮದ್ ಹಸನ್ ಪೂರ್ವ ಭಾರತದ ರಾಜ್ಯಗಳು ನಮ್ಮ ಬಂದರುಗಳನ್ನು ಬಳಸಿಕೊಳ್ಳಬಹುದಾಗಿದೆ:
ಭಾರತದ ನಾಯಕರೊಂದಿಗಿನ ನಮ್ಮ ಸಂಪರ್ಕ, ವ್ಯಾಪಾರ ಹಾಗೂ ಸಾಂಸ್ಕೃತಿಕ ವಿನಿಮಯ ಸೇರಿದಂತೆ ಅನೇಕ ವ್ಯಾಪಕ ವಿಷಯಗಳನ್ನು ಇಂದು ನಡೆದ ಸಭೆಯಲ್ಲಿ ಪ್ರಧಾನಿ ಹಾಗೂ ವಿದೇಶಾಂಗ ಸಚಿವರ ಜೊತೆಗೆ ಚರ್ಚಿಸಲಾಗಿದೆ. ಭಾರತವು ಬಾಂಗ್ಲಾದೇಶಕ್ಕೆ ಅತ್ಯಂತ ತುರ್ತು ಹಾಗೂ ಪ್ರಮುಖ ನೆರೆರಾಷ್ಟ್ರವಾಗಿದೆ. ಅಸ್ಸೋಂ, ತ್ರಿಪುರದಂತಹ ಪೂರ್ವ ಭಾರತದ ರಾಜ್ಯಗಳು ನಮ್ಮ ಬಂದರುಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಶ್ಯಾಮ್ ಬೆನೆಗಲ್ ನಿರ್ದೇಶನದಲ್ಲಿ ಬಾಂಗ್ಲಾ ರಾಷ್ಟ್ರಪಿತನ ಕುರಿತ ಸಿನಿಮಾ:
ಶ್ಯಾಮ್ ಬೆನೆಗಲ್ ಅವರ ನಿರ್ದೇಶನದಲ್ಲಿ ಬಾಂಗ್ಲಾ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಕುರಿತ ಸಿನಿಮಾದ ಸಹ-ನಿರ್ಮಾಣಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ಜನವರಿ 14 ರಂದು ಒಪ್ಪಂದ ಮಾಡಿಕೊಂಡಿದ್ದು, ಇದು ಬಾಂಗ್ಲಾದೇಶ ಸಂಸ್ಥಾಪಕರ ಜನ್ಮ ಶತಮಾನೋತ್ಸವದ ಅಂಗವಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಭಾರತದ ಚಿತ್ರರಂಗ ಬಹಳ ದೊಡ್ಡದಾಗಿದ್ದು, ಚೀನಾ ಸೇರಿ ಜಗತ್ತಿನಾದ್ಯಂತ ಭಾರತೀಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ. ನಾವು ಬಾಂಗ್ಲಾದ ಸಿನಿಮಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಬಯಸಿದ್ದು, ಢಾಕಾದಲ್ಲಿ ಬಂಗಬಂಧು ಚಿತ್ರನಗರಿಯನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದ್ದೇವೆ. ಇದಕ್ಕೆ ಭಾರತದ ಸಹಾಯ ಬೇಕಿದ್ದು, ಇದಕ್ಕಾಗಿಯೇ ನಾನು ವಿಶ್ವದ ಅತಿದೊಡ್ಡ ರಾಮೋಜಿ ಫಿಲ್ಮ್ ಸಿಟಿಗೆ ಬಂದಿದ್ದೇನೆ ಎಂದು ಹೇಳಿದರು.
ಹೊಸ ಮಾಧ್ಯಮಗಳು ಇಂದು ಪ್ರಪಂಚದ ವಾಸ್ತವವಾಗಿದೆ:
11 ವರುಷಗಳ ಹಿಂದೆ ಬಾಂಗ್ಲಾದೇಶದಲ್ಲಿ ಕೇವಲ ಆರು ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದರು. ಆದರೆ ಈಗ ಇಂಟರ್ನೆಟ್ ಬಳಕೆದಾರರ ಸಂಖ್ಯೆ 11 ಕೋಟಿಗೆ ಏರಿದೆ. ಡಿಜಿಟಲ್ ಮಾಧ್ಯಮವು ಮಾಹಿತಿಗಳನ್ನು ಪಡೆಯಲು ಹೊಸ ಮಾರ್ಗ ಸೃಷ್ಟಿಸಿದ್ದು, ಪ್ರಸ್ತುತ ಜಗತ್ತಿನ ವಾಸ್ತವವಾಗಿದೆ. ಬಾಂಗ್ಲಾದಲ್ಲಿ ಕೆಲವು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಜವಾಬ್ದಾರಿಯುತವಾಗಿಲ್ಲ. ಹೀಗಾಗಿ ನಮ್ಮ ಸರ್ಕಾರವು ಎಲ್ಲಾ ವೆಬ್ ಪೋರ್ಟಲ್‌ಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಇದೇ ವೇಳೆ ಹೇಳಿದರು.