ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ತಂದಿಟ್ಟಿರುವ ಆರ್ಥಿಕ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸದ್ಯ ದೇಶದಲ್ಲಿ ಜಾರಿಯಲ್ಲಿರುವ ವಿವಿಧ ಕಾರ್ಮಿಕ ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಹಲವಾರು ರಾಜ್ಯಗಳು ಕಳೆದ ವಾರ ಕೇಂದ್ರ ಸರಕಾರವನ್ನು ಆಗ್ರಹಿಸಿವೆ. ತನ್ನ ಕೆಲವೊಂದು ಕಾರ್ಮಿಕ ಕಾನೂನುಗಳನ್ನು ಸಡಿಲಿಸುವ ಮೂಲಕ ಮಧ್ಯಪ್ರದೇಶ ಈ ವಿಷಯದಲ್ಲಿ ನಾಯಕತ್ವ ವಹಿಸಿದಂತಿದ್ದು, ಕೋಮಾ ಸ್ಥಿತಿಗೆ ತಲುಪಿರುವ ಕೈಗಾರಿಕಾ ವಲಯವನ್ನು ಮತ್ತೆ ಜಾಗೃತಗೊಳಿಸುವ ಪ್ರಯತ್ನ ನಡೆಸಿದೆ. ಇದೇ ಮಾದರಿಯನ್ನು ವಿವಿಧ ಹಂತಗಳಲ್ಲಿ ಅನುಸರಿಸಿರುವ ಉತ್ತರಪ್ರದೇಶ, ಪಂಜಾಬ್, ರಾಜಸ್ತಾನ, ಗುಜರಾತ್, ಹರಿಯಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತಮ್ಮಲ್ಲಿರುವ ಕೈಗಾರಿಕೆಗಳ ಕೆಳಮುಖ ವೇಗವನ್ನು ನಿಯಂತ್ರಿಸುವ ಪ್ರಯತ್ನ ಮಾಡಿವೆ. ಒಡಿಶಾ, ಗೋವಾ ಮತ್ತು ಕರ್ನಾಟಕ ರಾಜ್ಯಗಳು ಕೂಡಾ ಕೆಲವು ವಿನಾಯಿತಿಗಳನ್ನು ಘೋಷಿಸಲು ಗಂಭೀರ ಚಿಂತನೆ ನಡೆಸಿವೆ.
ಕೆಲಸದ ಅವಧಿಯನ್ನು ಹೆಚ್ಚಿಸುವುದು, ಹೆಚ್ಚುವರಿ ಅವಧಿಯ ಮಿತಿಯಲ್ಲಿ ಹೆಚ್ಚಳ, ಅಧಿಕಾರಿಗಳಿಂದ ಘಟಕಗಳ ಪರಿಶೀಲನೆ ನಡೆಸುವುದನ್ನು ಕೈಬಿಡುವುದು ಹಾಗೂ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಮನ್ನಣೆಯನ್ನು ಮೂರು ತಿಂಗಳುಗಳಿಂದ ಒಂದು ವರ್ಷದವರೆಗೆ ಏರಿಸುವ ಮೂಲಕ ಸದಸ್ಯತ್ವ ಮಾನದಂಡದ ಅವಧಿಯನ್ನು ಹೆಚ್ಚಿಸುವ ಕ್ರಮಗಳನ್ನು ಇದು ಒಳಗೊಂಡಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳ ಪೈಕಿ ಮೂರನ್ನು ಹೊರತುಪಡಿಸಿ ಉಳಿದೆಲ್ಲವನ್ನೂ 1000 ದಿನಗಳವರೆಗೆ ಅಮಾನತಿನಲ್ಲಿಡುವ ಮೂಲಕ ಉತ್ತರಪ್ರದೇಶ ರಾಜ್ಯವು ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಸರಕಾರದಿಂದ ವಿನಾಯಿತಿ ಪಡೆದುಕೊಂಡಿರುವ ಆ ಮೂರು ಕಾನೂನುಗಳೆಂದರೆ ಕಟ್ಟಡ ಮತ್ತು ನಿರ್ಮಾಣ ಕಾಯಿದೆ, ಜೀತ ಕಾರ್ಮಿಕ ಕಾಯಿದೆ ಹಾಗೂ ವೇತನ ಮತ್ತು ಕೂಲಿ ಕಾಯಿದೆಯ 5ನೇ ಖಂಡ. ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಹುಷಾರಿನ ಹೆಜ್ಜೆ ಇಟ್ಟಿರುವ ಕೇರಳ, ಒಂದು ವೇಳೆ ಹೂಡಿಕೆದಾರರು ತಮ್ಮೆಲ್ಲ ಔಪಚಾರಿಕತೆಗಳನ್ನು ಒಂದು ವರ್ಷದೊಳಗೆ ಪೂರೈಸಲು ಒಪ್ಪಿದ್ದೇ ಆದರೆ ಹೊಸ ಉದ್ಯಮಕ್ಕೆ ಒಂದು ವಾರದ ಅವಧಿಯೊಳಗೆ ಅನುಮತಿ ನೀಡಲಾಗುವುದು ಎಂದು ಘೋಷಿಸಿದೆ. ಹೀಗಿದ್ದರೂ, ಕಾರ್ಮಿಕ ಕಾಯಿದೆಗಳಿಗೆ ಯಾವುದೇ ಬದಲಾವಣೆಗಳನ್ನು ಅದು ಸೂಚಿಸದಿರುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಆದರೆ, ಈ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯಗಳು ಈಗ ಏಕೆ ಎಚ್ಚೆತ್ತುಕೊಂಡಿವೆ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇದಕ್ಕೆ ಉತ್ತರವಾಗಿ ಎರಡು ಕಾರಣಗಳನ್ನು ನೀಡಬಹುದು. ಮೊದಲನೆಯದು, ದೊಡ್ಡಮಟ್ಟದಲ್ಲಿ ನಡೆದ ಕಾರ್ಮಿಕರ ಅಂತಾರಾಜ್ಯ ವಲಸೆಯಿಂದಾಗಿ, ಈಗಾಗಲೇ ತೀವ್ರ ಕೈಗಾರೀಕರಣಗೊಂಡಿರುವ ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಸೃಷ್ಟಿಯಾಗಿರುವ ನಿರ್ವಾತ ಪರಿಸ್ಥಿತಿ. ಸಾಕಷ್ಟು ಪ್ರಮಾಣದ ಕೆಲಸಗಾರರ ಅವಶ್ಯಕತೆ ಈಡೇರದಿದ್ದರೆ, ನರಳುತ್ತಿರುವ ಕೈಗಾರಿಕೆಗೆ ಪುನಃಶ್ಚೇತನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಘೋಷಿಸಿರುವ ವಿವಿಧ ಆರ್ಥಿಕ ಪ್ಯಾಕೇಜ್‌ಗಳ ಲಾಭ ಪಡೆಯುವುದು ಈ ರಾಜ್ಯಗಳಿಗೆ ಅಸಾಧ್ಯವಾಗುತ್ತದೆ. ವಲಸೆ ಕಾರ್ಮಿಕರು ಈಗಾಗಲೇ ದೊಡ್ಡಮಟ್ಟದಲ್ಲಿ ನಿರ್ಗಮಿಸಿದ್ದು, ಅವರೆಲ್ಲ ತಮ್ಮ ಮೂಲ ಘಟಕಗಳಿಗೆ ಹಿಂದಿರುಗುವುದು ಅನುಮಾನಾಸ್ಪದ. ಹೀಗಾಗಿ, ಅಳಿದುಳಿದ ಕೆಲಸಗಾರರ ಮೂಲಕವೇ ಕಾರ್ಖಾನೆಗಳು ಮತ್ತೆ ಪ್ರಾರಂಭವಾಗಬೇಕಿದೆ. ಕಾರ್ಮಿಕರನ್ನು ಸುದೀರ್ಘ ಅವಧಿಗೆ ದುಡಿಸಿಕೊಳ್ಳುವುದರ ಮೂಲಕ ಉತ್ಪಾದನೆಯನ್ನು ನಿರಂತರವಾಗಿರಿಸುವುದು ಹೊಸ ತಿದ್ದುಪಡಿಗಳಿಂದ ಸಾಧ್ಯವಾಗುತ್ತದೆ. ಇದು ಕೈಗಾರಿಕೆಯಷ್ಟೇ ಅಲ್ಲ, ಆರ್ಥಿಕತೆಯ ಪುನಃಶ್ಚೇತನಕ್ಕೂ ನೆರವಾಗುತ್ತದೆ. ಅಷ್ಟೇ ಅಲ್ಲ, ಈ ಬೆಳವಣಿಗೆಗಳಿಂದ ವಲಸೆ ಕಾರ್ಮಿಕರಲ್ಲಿ ವಿಶ್ವಾಸ ಮೂಡಿ ಅವರು ಮತ್ತೆ ಹಿಂದಿರುಗುವ ಸಾಧ್ಯತೆಯೂ ಇದೆ.
ಎರಡನೆಯದಾಗಿ, ಸದ್ಯ ಚೀನಾದಲ್ಲಿ ನೆಲೆಯಾಗಿರುವ ಹಲವಾರು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಯೋಚಿಸುತ್ತಿವೆ. ಉದ್ಯೋಗದಾತರ ಪರವಾಗಿರುವ ಇಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಭಾರತಕ್ಕೆ ಸ್ಥಳಾಂತರವಾಗಲು ಈ ಉತ್ಪಾದಕ ಘಟಕಗಳಲ್ಲಿ ಪ್ರೇರಣೆ ಮೂಡಿಸಬಹುದಾಗಿದೆ. ಅಮೆರಿಕದ ದೈತ್ಯ ಕಂಪನಿ ಆಪಲ್, ಚೀನಾದಲ್ಲಿರುವ ತನ್ನ ಕಾರ್ಯಾಚರಣೆಯ ಶೇಕಡಾ 25ರಷ್ಟು ಕೆಲಸಗಳನ್ನು ಭಾರತಕ್ಕೆ ಸ್ಥಳಾಂತರಿಸುವುದಾಗಿ ಈಗಾಗಲೇ ಘೋಷಿಸಿದೆ. ಚೀನಾದಲ್ಲಿರುವ ಅಂದಾಜು 1000 ಅಮೆರಿಕಾದ ಕಂಪನಿಗಳು ತಮ್ಮ ವಹಿವಾಟನ್ನು ಭಾರತಕ್ಕೆ ಸ್ಥಳಾಂತರಿಸುವ ಕುರಿತು ಭಾರತೀಯ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆಗಳನ್ನು ನಡೆಸಿರುವ ಕುರಿತ ವರದಿಗಳಿವೆ. ಭಾರತ ಸರಕಾರ ಕೂಡಾ ವಾಹನೋದ್ಯಮ, ಎಲೆಕ್ಟ್ರಾನಿಕ್ಸ್, ಹಾರ್ಡ್ ವೇರ್, ವೈದ್ಯಕೀಯ ಉಪಕರಣಗಳ ಸಹಿತ ಔಷಧೀಯ ಉದ್ಯಮಗಳು, ಚರ್ಮ, ಆಹಾರ ಸಂಸ್ಕರಣೆ ಮತ್ತು ಹೆವಿ ಎಂಜಿನಿಯರಿಂಗ್ ಕಂಪನಿಗಳನ್ನು ಗುರಿಯಾಗಿ ಇಟ್ಟುಕೊಂಡು, ಅವು ತಮ್ಮ ಘಟಕಗಳನ್ನು ಸ್ಥಳಾಂತರಿಸುವಂತೆ ಮನವೊಲಿಸುವ ಪ್ರಯತ್ನ ನಡೆಸಿದೆ ಎಂದೂ ಹೇಳಲಾಗುತ್ತಿದೆ.