ಚಂಡೀಗಢ:ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಯಾವೊಂದ ಪಕ್ಷವೂ ಬಹುಮತ ಪಡೆಯದೇ ಇರಲು ಕಾರಣ ಜೆಜೆಪಿ ಪಕ್ಷದ ನಾಯಕ ದುಷ್ಯಂತ್ ಸಿಂಗ್ ಚೌಟಾಲ.
ಕಳೆದ ಬಾರಿ ಒಂದು ಸ್ಥಾನವನ್ನೂ ಗೆಲುವನ್ನು ಸಾಧಿಸದ ಜೆಜೆಪಿ ಈ ಬಾರಿ 10 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಚೌಟಾಲ ಅವರು ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ್ದಾರೆ. ದುಷ್ಯಂತ್ ಸಿಂಗ್ ಅವರು ಉಚನಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಮಾಜಿ ಸಚಿವರೊಬ್ಬರ ಪತ್ನಿಯ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ನಡೆಸಿದ ಅಬ್ಬರದ ಪ್ರಚಾರದಿಂದಲೇ ಇತ್ತ ಬಿಜೆಪಿ, ಅತ್ತ ಕಾಂಗ್ರೆಸ್ಗೂ ಸ್ಪಷ್ಟ ಬಹುಮತ ಸಿಗಲಿಲ್ಲ.
ಕಾಂಗ್ರೆಸ್ ಪಕ್ಷ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ, ದುಷ್ಯಂತ್ ಸಿಂಗ್ ಮುಖ್ಯಮಂತ್ರಿ ಪಟ್ಟ ಬೇಡಿಕೆ ಇಟ್ಟಿದ್ದಾರೆ. ಸಿಎಂ ಸ್ಥಾನ ಕೊಟ್ಟರೆ ಮಾತ್ರ ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಖಡಾ ಕಂಡಿತವಾಗಿ ನುಡಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ, ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಪರಿಸ್ಥಿತಿಯೇ ಎದುರಾಗಿದೆ.
ಚೌಟಾಲ ಅವರು ಹಿಸ್ಸಾರ್ ಲೋಕಸಭಾ ಕ್ಷೇತ್ರದಿಂದ 26ನೇ ವಯಸ್ಸಿನಲ್ಲೇ ಸ್ಪರ್ಧಿಸಿ ಗೆಲುವಿನ ಕೇಕೆ ಹಾಕಿದ್ದರು. ಇವರ ತಂದೆ ಅಜಯ್ ಚೌಟಾಲ ಕೂಡ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದುಷ್ಯಂತ್ ಚೌಟಾಲ ಅವರು ಮಾಜಿ ಉಪಪ್ರಧಾನಿ ದೇವೀಲಾಲ್ ಅವರ ಮರಿಮೊಮ್ಮಗ. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ.