ಇತ್ತೀಚಿನ ದಿನಗಳಲ್ಲಿ ಮಾನವ ರಹಿತ ವೈಮಾನಿಕ ವಾಹನ (ಡ್ರೋಣ್)ನಿಂದಲೇ ಭದ್ರತಾ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸೌದಿ ಅರೇಬಿಯಾದ ಪ್ರಮುಖ ತೈಲ ಘಟಕಗಳ ಮೇಲೆ ನಡೆದ ಡ್ರೋನ್ ದಾಳಿ ನಡೆಸಿ ತೈಲಾಗಾರ ಹೊತ್ತಿ ಉರಿಯುವಂತೆ ಮಾಡಿ ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಘಟನೆ ಮೆರೆಯುವ ಮುನ್ನವೇ ಪಂಜಾಬ್ ಗಡಿಯಲ್ಲಿ ಡ್ರೋನ್‌ಗಳ ಸಹಾಯದಿಂದ ಪಾಕಿಸ್ತಾನ ಶಸ್ತ್ರಾಸ್ತ್ರ ದಾಳಿ ನಡೆಸಿತು. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಶಕ್ತಿಗಳು ದೇಶ-ದೇಶಗಳ ನಡುವೆ ಅರಾಜಕತೆ ಸೃಷ್ಟಿಸುತ್ತಿವೆ. ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ದೇಶಗಳು ತಮ್ಮ ಮೇಲ್ಮೈಯನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ ಎಂಬುದು ಈಗ ಸವಾಲಾಗಿ ಪರಿಣಮಿಸಿದೆ.
ಡ್ರೋನ್ ಹೆಚ್ಚು ಉಪಯೋಗಿಸುವುದು ರಕ್ಷಣಾ ದಳಗಳೇ. ಸಮೀಕ್ಷೆ, ಡಾಕ್ಯುಮೆಂಟರಿ, ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಸೇರಿದಂತೆ ವಿಧ ವಿಧವಾಗಿ ಅದರ ಬಳಕೆ ಈಗ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಒಟ್ಟು 6 ಲಕ್ಷ ಡ್ರೋಣ್ಗಳು (ಅನುಮತಿ/ಅನಿಯಂತ್ರಿತ) ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಜಗತ್ತಿನಲ್ಲಿ ಎಷ್ಟಿರಬಹುದು. 2021ರ ವೇಳೆಗೆ ವಿಶ್ವದಾದ್ಯಂತ ಮಾನವ ರಹಿತ ವಿಮಾನ ಮಾರುಕಟ್ಟೆ ವ್ಯವಸ್ಥೆ ₹ 2,200 ಕೋಟಿ ಡಾಲರ್ಸ್ ತಲುಪಲಿದ್ದು, ಭಾರತದಲ್ಲೇ ₹ 88.6 ಕೋಟಿ ಡಾಲರ್ಸ್ ವಹಿವಾಟು ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅನಧಿಕೃತ ಡ್ರೋನ್‌ಗಳನ್ನು ಎದುರಿಸಲು ಶಸ್ತ್ರಸಜ್ಜಿತ ರಾಡಾರ್ ವ್ಯವಸ್ಥೆಯನ್ನು ಸರ್ಕಾರ ಮತ್ತು ರಕ್ಷಣಾ ಸಂಸ್ಥೆಗಳು ಸ್ಥಾಪಿಸಿದ್ದರೂ ಶಂಕಿತ ಡ್ರೋನ್‌ಗಳ ಪತ್ತೆ ಹಚ್ಚಲು ಮತ್ತು ಹೊಡೆದುರುಳಿಸಲು ವಿಫಲವಾದದ್ದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ದಾಳಿ, ಪಂಜಾಬ್ ಗಡಿಯಲ್ಲಿ ದಾಳಿ, ಅಮೆರಿಕದಲ್ಲಿ ಮಾಹಿತಿ ಕಳುವು ಸೇರಿದಂತೆ ಹಲವು ಘಟನೆಗಳ ಜರುಗಿದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಈ ಬಗ್ಗೆ ಎಲ್ಲ ದೇಶಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗುವುದು ಅನಿವಾರ್ಯ. ಪ್ರಸ್ತುತ ನಿಷೇಧಿತ ಪ್ರದೇಶಗಳಿಗೆ ಡ್ರೋಣ್ ಹಾರಬಿಟ್ಟು ಕೆಲವು ಪ್ರತ್ಯೇಕ ಕಂಪ್ಯೂಟರ್ ಅಪ್ಲಿಕೇಷನ್ಸ್ ಮೂಲಕ ವಿವಿಧ ದೇಶಗಳ ಗುಪ್ತ ಮಾಹಿತಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಕಾರಣ ಡ್ರೋಣ್ಗೆ ಬೇಡಿಕೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಶೇ.70ರಷ್ಟು ಡ್ರೋಣ್ಗಳನ್ನು ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು ಚೀನಾ ಎಂಬ ಮಾಹಿತಿಯೂ ಇದೆ. ಭಾರತದಲ್ಲಿ ಇಲ್ಲಿಯವರೆಗೂ ಡಾಕ್ಯುಮೆಂಟರಿ ಚಿತ್ರೀಕರಣ, ಸರ್ಕಾರಕ್ಕೆ ಸಂಬಂಧಿಸಿದ ಸರ್ವೇಗಳಿಗೆ (ಖಾಸಗಿ) ಮಾತ್ರ ಡ್ರೋಣ್ ಬಳಕೆಗೆ ಅವಕಾಶ ಇತ್ತು. ಕಳೆದ ಡಿಸೆಂಬರ್ನಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ನಿಯಮ ಸಡಿಲಿಸಿತು. ಅದೇ ಸಮಯದಲ್ಲಿ ವಾಣಿಜ್ಯ ಡ್ರೋಣ್ ಮೀರಿಸುವ ಸಾಮರ್ಥ್ಯವುಳ್ಳ ಡ್ರೋಣ್ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಸಕ್ತ ಕಂಪನಿಗಳಿಂದ ಮೇನಲ್ಲಿ ಅರ್ಜಿಗಳನ್ನು ಸ್ವೀಕರಿಸಿತು.