ಕೋವಿಡ್-19 ಸಂಕಷ್ಟದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ ಆಡಳಿತದ ನಿತ್ಯದ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ತುಸು ಸವಾಲಿನ ಕೆಲಸವೇ ಆಗಿದೆ. ಜಗತ್ತಿನಲ್ಲಿ ಸರ್ಕಾರ, ಸಂಘ - ಸಂಸ್ಥೆಗಳು ಮತ್ತು ಸಮಾಜ ಎಲ್ಲವೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರಸ್ಪರ ಹೇಗೆ ಕೆಲಸ ಮಾಡುವುದು ಎಂಬ ಬಗ್ಗೆ ಹಲವಾರು ಪ್ರಯತ್ನಗಳು ನಡೆಯುತ್ತಿವೆ.
ಮುಂಚೂಣಿಯಲ್ಲಿ ನಿಂತು ಕೋವಿಡ್ ಹೋರಾಟ ನಡೆಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಇಲಾಖೆ, ಖಾಸಗಿ ಭದ್ರತಾ ಪಡೆ ಹಾಗೂ ಅಧಿಕಾರಿಗಳು ನಿಜವಾದ ಅರ್ಥದಲ್ಲಿ ಹೀರೋಗಳಾಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ, ಜಿಐಎಸ್ ಮತ್ತು ಮ್ಯಾಪಿಂಗ್, ಲೊಕೇಶನ್ ತಂತ್ರಜ್ಞಾನ ಹಾಗೂ ಸ್ವಯಂಚಾಲಿತ ಯಂತ್ರಗಳು ಕೋವಿಡ್ ನಿಯಂತ್ರಣದಲ್ಲಿ ಇತ್ತೀಚೆಗೆ ಪ್ರಮುಖ ಪಾತ್ರ ವಹಿಸುತ್ತಿವೆ.
ಅದರಲ್ಲೂ ದೂರದಿಂದಲೇ ನಿಯಂತ್ರಿಸಬಲ್ಲ ಮಾನವ ರಹಿತ ಡ್ರೋನ್ ತಂತ್ರಜ್ಞಾನ ಕೊರೊನಾ ವೈರಸ್ ಹೋರಾಟದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದೆ. ಪೊಲೀಸರು ಈಗ ಡ್ರೋನ್ಗಳ ಮುಖಾಂತರ ಬಹುದೊಡ್ಡ ಪ್ರದೇಶದ ಮೇಲೆ ನಿರಂತರ ಕಣ್ಗಾವಲಿರಿಸಬಲ್ಲರು. ಖುದ್ದಾಗಿ ಸ್ಥಳಕ್ಕೆ ಹೋಗುವ ಅಗತ್ಯ ಕಡಿಮೆಯಾಗಿರುವುದರಿಂದ ಅವರಿಗೆ ಸೋಂಕು ಹರಡುವ ಅಪಾಯ ಅಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಆದಾಗ್ಯೂ ಡ್ರೋನ್ಗಳ ಬಳಕೆಯಿಂದ ವ್ಯಕ್ತಿಯ ಖಾಸಗಿತನ ಹಾಗೂ ಬದುಕುವ ಹಕ್ಕಿಗೆ ಚ್ಯುತಿಯುಂಟಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಹಾಗೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿದೆ. ಅದೇನೇ ಇದ್ದರೂ ಡ್ರೋನ್ಗಳ ಬಳಕೆಯಿಂದ ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರುವುದಂತೂ ಸತ್ಯ.
ಪ್ರಸ್ತುತ ಕೋವಿಡ್-19 ಸಂಕಷ್ಟದ ಅವಧಿಯಲ್ಲಿ ಡ್ರೋನ್ಗಳನ್ನು ಯಾವೆಲ್ಲ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಹಾಗೂ ಅವುಗಳ ಬಳಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡೋಣ.
ಡ್ರೋನ್ ಬಳಕೆಯ ಉದ್ದೇಶಗಳು ಹಾಗೂ ಅದರ ಪರಿಣಾಮಗಳು
ಮಾಹಿತಿ ಪ್ರಸಾರ: ನಿರ್ದಿಷ್ಟ ಪ್ರದೇಶದಲ್ಲಿ ಆಗು ಹೋಗುಗಳ ಮೇಲೆ ಕಣ್ಣಿಡುವ ಹೊರತಾಗಿ, ಲಾಕ್ಡೌನ್ ನಿಯಮಗಳು ಹಾಗೂ ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಕುರಿತು ಡ್ರೋನ್ ಲೌಡ್ಸ್ಪೀಕರ್ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಗುಡ್ಡಗಾಡಿನಲ್ಲಿರುವ ಹಾಗೂ ಸಂಪರ್ಕ ಸಾಧನಗಳ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಡ್ರೋನ್ ಬಳಸಿ ಜನರಿಗೆ ಆರೋಗ್ಯ ಸಂಬಂಧಿ ಮಾಹಿತಿ ತಲುಪಿಸಲಾಗುತ್ತಿರುವುದು ತಂತ್ರಜ್ಞಾನದ ಬಹುದೊಡ್ಡ ಸದುಪಯೋಗವಾಗಿದೆ. ಚೀನಾ ಹಾಗೂ ಯುರೋಪಿನ ಕೆಲ ಪ್ರದೇಶಗಳಲ್ಲಿ ಇಂಥ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಸೋಂಕು ನಿವಾರಕ ದ್ರಾವಣ ಸಿಂಪಡಣೆ: ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು, ಕೃಷಿಗಾಗಿ ಬಳಸುವ ರಾಸಾಯನಿಕ ಸಿಂಪಡಣೆ ಯಂತ್ರಗಳನ್ನು ಡ್ರೋನ್ಗಳಿಗೆ ಜೋಡಿಸಿ ಕೋವಿಡ್ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಗಿಂತ ಡ್ರೋನ್ ಮೂಲಕ ಈ ಕೆಲಸ 50 ಪಟ್ಟು ಕಡಿಮೆ ಸಮಯದಲ್ಲಿ ಮಾಡಬಹುದು ಹಾಗೂ ಅತಿ ಹೆಚ್ಚು ಪ್ರದೇಶದಲ್ಲಿ ದ್ರಾವಣವನ್ನು ಸಿಂಪಡಿಸಬಹುದು. ದ್ರಾವಣ ಸಿಂಪಡಿಸುವ ಡ್ರೋನ್ ಒಂದಕ್ಕೆ ಒಂದು ಬಾರಿ 16 ಲೀಟರ್ನಷ್ಟು ದ್ರಾವಣವನ್ನು ತುಂಬಿಸಬಹುದು ಹಾಗೂ ಒಂದು ಗಂಟೆಯಲ್ಲಿ 1 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಇದನ್ನು ಸಿಂಪಡಿಸಬಹುದು ಎಂದು ಜಗತ್ತಿನ ಅತಿ ದೊಡ್ಡ ಡ್ರೋನ್ ಯಂತ್ರ ತಯಾರಿಕಾ ಕಂಪನಿ ಡಿಜೆಐ ಹೇಳಿದೆ.