ರಾಷ್ಟ್ರೀಯ ಭೂ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ -ಎನ್‌ಜಿಆರ್‌ಐ) ಭೂ ಅನ್ವೇಷಣೆಗೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಡ್ರೋನ್ ಬಳಸಿಕೊಂಡು, ಆಯಸ್ಕಾಂತೀಯ ಅಲೆಗಳನ್ನು ಬಳಸಿಕೊಂಡು, ಇದು ಭೌಗೋಳಿಕ ಸಂಶೋಧನೆ, ಅನ್ವೇಷಣೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ. ಇದರ ಮೂಲಕ, ಖನಿಜ ಅನ್ವೇಷಣೆ, ಭೌಗೋಳಿಕ ರಚನೆ ವಿವರಣೆ ಮತ್ತು ಭೂನಕ್ಷೆಯ ತಯಾರಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಈ ಹೊಸ ತಂತ್ರಜ್ಞಾನ, ಅದರ ವಿನ್ಯಾಸ ಹಾಗೂ ಅದರ ಕೆಲಸದ ಮಾದರಿಯನ್ನು ಸ್ವತಃ ಎನ್‌ಜಿಆರ್‌ಐ ನಡೆಸಿದೆ. ಈ ಹೊಸ ತಂತ್ರಜ್ಞಾನವು ಹೊಸ ಸಂಶೋಧನೆ, ಅನ್ವೇಷಣೆಗೆ ತೆಗೆದುಕೊಳ್ಳುತ್ತಿದ್ದ ಸಮಯವನ್ನು ಉಳಿಸುವ ಜೊತೆಗೆ, ದೂರದ, ತಲುಪಲು ಕಷ್ಟವಾಗ ಬಹುದಾದ ಪ್ರದೇಶಗಳಲ್ಲಿ ತ್ವರಿತವಾಗಿ ಸಂಶೋಧನೆ ಕೈಗೆತ್ತಿಕೊಳ್ಳಲು ನೆರವಾಗುತ್ತದೆ ಎಂದು ಸಿಎಸ್‌ಐಆರ್-ಎನ್‌ಜಿಆರ್‌ಐ ನಿರ್ದೇಶಕ ಡಾ.ವಿ.ಎಂ ತಿವಾರಿ ಮಾಹಿತಿ ನೀಡಿದ್ದಾರೆ.
ಈ ಕ್ರಾಂತಿಕಾರಿ, ಹೊಸ ಸಾಧನ ಹಾಗೂ ತಂತ್ರಜ್ಞಾನದ ಬಗ್ಗೆ, ಅಕ್ಟೋಬರ್ 11 ರಂದು ಸಂಸ್ಥೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ, ಡಾ. ತಿವಾರಿ ಮಾಹಿತಿ ನೀಡಿದ್ದಾರೆ. ಈ ನಾಡು ಜೊತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರಿಸಿದ್ದಾರೆ.
ಭೌಗೋಳಿಕ ಸಂಶೋಧನೆಯಲ್ಲಿ ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬಳಸಲಾಗುತ್ತಿದೆ?
ಈ ಹೊಸ ತಂತ್ರಜ್ಞಾನ, ಭೂಮಿಯ ಕೆಳಗಿನ, ಅಂತರ್ಜಲವನ್ನು ಪತ್ತೆ ಹಚ್ಚುವುದು, ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳನ್ನು ಅನ್ವೇಷಿಸುವುದು ಮತ್ತು ಭೂಕಂಪನ ವಲಯಗಳನ್ನು ಕಂಡುಹಿಡಿಯಲು ಸೂಕ್ತವಾಗಿದೆ. ನಾವು ಆಯಸ್ಕಾಂತೀಯ ಅಲೆಗಳನ್ನು ನಾನಾ ಅನ್ವೇಷಣೆಗಳಿಗೆ ಬಳಸಿಕೊಳ್ಳುತ್ತೇವೆ. ಆರಂಭದಲ್ಲಿ, ಸಂಶೋಧಕರು ಖನಿಜಗಳು ಮತ್ತು ಅಂತರ್ಜಲವನ್ನು ಹಸ್ತಚಾಲಿತ ಸಾಧನಗಳ ಮೂಲಕ ಪತ್ತೆ ಹಚ್ಚುತ್ತಿದ್ದರು. ಕೆಲವು ವರ್ಷಗಳ ಹಿಂದೆ, ಹೆಲಿಕಾಪ್ಟರ್‌ನ ಮೂಲಕ ಮ್ಯಾಗ್ನೆಟೋಮೀಟರ್ ಬಳಸಿ ನಾವು ಸಮೀಕ್ಷೆಗಳನ್ನು ನಡೆಸುತ್ತಿದ್ದೆವು. ಇದು ದುಬಾರಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ, ಎನ್‌ಜಿಆರ್‌ಐ ಡ್ರೋನ್ ಅಥವಾ ಮಾನವರಹಿತ ವೈಮಾನಿಕ ವಾಹನ (ಯುಎವಿ) ಆಧಾರಿತ ಅಯಸ್ಕಾಂತೀಯ ಪರಿಶೋಧನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಭಾರತದಲ್ಲಿ ಇದು ಮೊದಲನೆಯದು. ನಾವು ಯುಎವಿ - ಮ್ಯಾಗ್ನೆಟೋಮೀಟರ್ ಬಳಸಿ ಯಾಚರಾಮ್ (ಹೈದರಾಬಾದ್ ಉಪನಗರಗಳ ಪಟ್ಟಣ) ವನ್ನು ಸಮೀಕ್ಷೆ ಮಾಡಿದ್ದೇವೆ ಮತ್ತು ಈ ಸಮೀಕ್ಷೆಯ ಫಲಿತಾಂಶಗಳು ನಿಖರವಾಗಿವೆ. ಈ ತಂತ್ರಜ್ಞಾನದಿಂದ ದೂರದ ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಭೌಗೋಳಿಕ ಸಂಶೋಧನೆ, ಅಧ್ಯಯನ ಹಾಗೂ ಅನ್ವೇಷಣೆ ನಡೆಸುವುದು ಸುಲಭವಾಗುತ್ತದೆ.
ಆರು ದಶಕಗಳ ಭೂಕಂಪನ ಬಗ್ಗೆಗಿನ ಅಧ್ಯಯನ ಈಗ ಯಾವ ಹಂತ ತಲುಪಿದೆ?
ಭೂಕಂಪಗಳ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಿದೆ. ಪ್ರಸ್ತುತ, ನಾವು ಭೂಕಂಪನ ವಲಯಗಳನ್ನು ಮತ್ತು ನಡುಕಗಳ ತೀವ್ರತೆಯನ್ನು ಮಾತ್ರ ಗುರುತಿಸಬಹುದು. ಭೂಕಂಪಗಳ ಬಗ್ಗೆ ಮೊದಲೇ ಸುಳಿವು ನೀಡಬಲ್ಲ ತಂತ್ರಜ್ಞಾನವನ್ನು ನಾವು ಇನ್ನೂ ಅಭಿವೃದ್ಧಿಪಡಿಸಿಲ್ಲ. ಭೂಕಂಪಶಾಸ್ತ್ರದ ಸಂಶೋಧನೆಯಲ್ಲಿ ಜಿಪಿಎಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಪ್ರಮುಖ ಪಾತ್ರ ವಹಿಸುತ್ತಿವೆ.