ಕರ್ನಾಟಕ

karnataka

ETV Bharat / bharat

ಉನ್ನಾವೋ ರೇಪ್​ ಕೇಸ್: ಟ್ರಕ್​ ಚಾಲಕ ಹಾಗೂ ಹೆಲ್ಪರ್​ಗೆ ನಾರ್ಕೋ ಟೆಸ್ಟ್: ಸಿಬಿಐ - ಉನ್ನಾವೋ ಪ್ರಕರಣ

ನಾರ್ಕೋ ಅನಾಲಿಸಿಸ್​ ಪರೀಕ್ಷೆಯಲ್ಲಿ ಆರೋಪಿಗೆ ಬರ್ಬಿಟ್ಯುರೆಟ್ಸ್​ ಎಂದು ಕರೆಯಲಾಗುವ ರಾಸಾಯನಿಕವನ್ನು ಸಿರಿಂಜ್​ ಮೂಲಕ ನೀಡಿ ಮನಸ್ಸಿನಿಂದ ನಿಗ್ರಹಿಸಲ್ಪಟ್ಟ ಹಾಗೂ ಮುಚ್ಚಿಟ್ಟ ನೆನಪುಗಳನ್ನು, ಘಟನೆಗಳನ್ನು ಬಯಲಿಗೆಳೆಯಲಾಗುತ್ತದೆ.

ಉನ್ನಾವೋ

By

Published : Aug 20, 2019, 6:23 AM IST

ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್​ನ ಚಾಲಕ ಹಾಗೂ ಸಹಾಯಕನಿಗೆ ನಾರ್ಕೋ( ಸುಳ್ಳು ಪತ್ತೆ ಪರೀಕ್ಷೆ) ಟೆಸ್ಟ್​ ನಡೆಸಲು ನಿರ್ಧರಿಸಿದ್ದು, ಹೀಗಾಗಿ ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆಯಲು ಸಿಬಿಐ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಸಿಬಿಐ ಈಗಾಗಲೇ ಈ ಇಬ್ಬರಿಗೆ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಬ್ರೈನ್​ ಮ್ಯಾಪಿಂಗ್​ ಪರೀಕ್ಷೆಯನ್ನು ಗುಜರಾತ್​ನ ಗಾಂಧಿನಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದೆ. ಆದರೆ ಅದರ ವರದಿ ಇನ್ನಷ್ಟೇ ಬರಬೇಕಿದೆ. ಇನ್ನು ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ಯಾಚಾರ ಸಂತ್ರಸ್ತೆಯನ್ನು ತನಿಖಾ ಸಂಸ್ಥೆ ಇನ್ನೂ ಮಾತನಾಡಿಸಿಲ್ಲ. ವೈದ್ಯರು ಆಕೆ ಯಾವುದೇ ಸಂಭಾಷಣೆ ನಡೆಸಲು ವೈದ್ಯಕೀಯವಾಗಿ ಅನರ್ಹಳು ಎಂದು ಹೇಳಿರುವ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ಆಕೆಯ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ತಜ್ಞರು ಹಾಗೂ ಪ್ರತ್ಯಕ್ಷದರ್ಶಿಗಳ ಸಲಹೆ ಪಡೆದು ಘಟನೆಯ ಮರುಸೃಷ್ಟಿ ಮಾಡಲು ಕೂಡ ಚಿಂತಿಸುತ್ತಿದೆ. ಈಗಾಗಲೇ ಪ್ರಕರಣದ ಬಗ್ಗೆ 2 ವಾರದೊಳಗಾಗಿ ತನಿಖೆ ಪೂರ್ತಿ ಗೊಳಿಸುವಂತೆ ಸುಪ್ರೀಂಕೋರ್ಟ್​ ಸಿಬಿಐಗೆ ನಿರ್ದೇಶನ ನೀಡಿದ್ದು, ತನಿಖೆ ಪೂರ್ಣಗೊಳಿಸುವ ಭರವಸೆಯಲ್ಲಿ ಸಿಬಿಐ ಅಧಿಕಾರಿಗಳಿದ್ದಾರೆ.

ಏನಿದು ನಾರ್ಕೋ ಅನಾಲಿಸಿಸ್ ಪರೀಕ್ಷೆ

ನಾರ್ಕೋ ಅನಾಲಿಸಿಸ್​ ಪರೀಕ್ಷೆಯಲ್ಲಿ ಆರೋಪಿಗೆ ಬರ್ಬಿಟ್ಯುರೆಟ್ಸ್​ ಎಂದು ಕರೆಯಲಾಗುವ ರಾಸಾಯನಿಕವನ್ನು ಸಿರಿಂಜ್​ ಮೂಲಕ ನೀಡಿ ಮನಸ್ಸಿನಿಂದ ನಿಗ್ರಹಿಸಲ್ಪಟ್ಟ ಹಾಗೂ ಮುಚ್ಚಿಟ್ಟ ನೆನಪುಗಳನ್ನು, ಘಟನೆಗಳನ್ನು ಬಯಲಿಗೆಳೆಯಲಾಗುತ್ತದೆ. ಇದನ್ನು ಸತ್ಯದ್ರವ(truth serum) ಎಂದು ಕೂಡ ಕರೆಯಲಾಗುತ್ತದೆ. ಈ ವೇಳೆ ದೇಹಕ್ಕೆ ಅಳವಡಿಸಿರುವ ಪಾಲಿಗ್ರಾಪ್​ನಲ್ಲಿ ಏರ್ಪಡುವ ತರಂಗಾಂತರದಲ್ಲಾಗುವ ಬದಲಾವಣೆಗಳಿಂದ ಆತ ಸುಳ್ಳು ಹೇಳುತ್ತಿದ್ದಾನೋ ಸತ್ಯ ಹೇಳುತ್ತಿದ್ದಾನೋ ಎನ್ನುವುದು ತಿಳಿಯುತ್ತದೆ.

ಅಂದು ನಡೆದಿದ್ದೇನು?

ಉತ್ತರ ಪ್ರದೇಶದ ರಾಯ್​ ಬರೇಲಿಯಲ್ಲಿ ಜುಲೈ 28ರಂದು ಉನ್ನಾವೋ ರೇಪ್​ ಸಂತ್ರಸ್ತೆ , ಆಕೆಯ ವಕೀಲರು ಹಾಗೂ ಸಂಬಂಧಿಕರು ಚಲಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ನಂಬರ್​ ಪ್ಲೇಟ್​ ಇಲ್ಲದ ಟ್ರಕ್​ವೊಂದು ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ರೇಪ್​ ಸಂತ್ರಸ್ತೆಯ ಇಬ್ಬರು ಸಂಬಂಧಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಆಕೆ ಹಾಗೂ ಆಕೆಯ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಲಕ್ನೋದ ಕಿಂಗ್​ ಜಾರ್ಜ್​ ಮೆಡಿಕಲ್​ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏರ್​ ಲಿಫ್ಟ್​ ಮೂಲಕ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2017ರಲ್ಲಿ 19 ವರ್ಷದ ಯುವತಿಯ ಮೇಲೆ ಗ್ಯಾಂಗ್​ ರೇಪ್​ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ ಕುಲ್ದೀಪ್​ ಸಿಂಗ್​ ಪ್ರಮುಖ ಆರೋಪಿಯಾಗಿದ್ದಾರೆ.

ABOUT THE AUTHOR

...view details