ನವದೆಹಲಿ:ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಯಿಕೋಡ್‌ನ ಕರಿಪುರ ವಿಮಾನ ನಿಲ್ದಾಣದ ಹೊರಗೆ ಮೂವರನ್ನು ಬಂಧಿಸಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 4.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ ಮಂಡಳಿ (ಸಿಬಿಐಸಿ) ಮಾಡಿದ ಟ್ವೀಟ್‌ನಲ್ಲಿ, ಕೊಚ್ಚಿನ್ ವಲಯ ಘಟಕ ಮತ್ತು ಕ್ಯಾಲಿಕಟ್ (ಕೊಯೊಕೋಡ್) ಪ್ರಾದೇಶಿಕ ಘಟಕದ ಡಿಆರ್‌ಐ ಅಧಿಕಾರಿಗಳು ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಸಾಗಿಸುತ್ತಿರುವುದಾಗಿ ಶಂಕಿಸಿ ವಾಹನ ತಡೆದಿದ್ದಾರೆ.
ಈ ವೇಳೆ ಇಬ್ಬರು ಡಿಆರ್‌ಐ ಸಿಬ್ಬಂದಿ ಮೇಲೆ ಕಾರು ಹರಿಸಲು ಯತ್ನಿಸಲಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಡಿಆರ್‌ಐ ಸಿಬ್ಬಂದಿ, ಗುಪ್ತಚರ ಅಧಿಕಾರಿ ಮತ್ತು ಚಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
"ಸಂಯುಕ್ತ ರೂಪದಲ್ಲಿದ್ದ 4.3 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐಸಿ ತಿಳಿಸಿದೆ. ಗಾಯಗೊಂಡ ಡಿಆರ್‌ಐ ಅಧಿಕಾರಿಗಳ ಯೋಗಕ್ಷೇಮದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಚಾರಿಸಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸಿಬಿಐಸಿಗೆ ಸೂಚಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.