ಮುಂಬೈ:ಉದ್ಧವ್ ಠಾಕ್ರೆ ಸಾರ್ವಜನಿಕ ಸೇವೆಯಲ್ಲಿದ್ದರೂ ಕೊಳಕು ರಾಜಕೀಯ ಮಾಡುತ್ತಿದ್ದು, ಅವರು ಪಡೆದ ಕುರ್ಚಿಗೆ ಅರ್ಹರಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮಹಾರಾಷ್ಟ್ರ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್ 'ನೀವು ಮುಖ್ಯಮಂತ್ರಿಯಾಗಲು ನಾಚಿಕೆ ಪಡಬೇಕು. ಒಂದು ರಾಜ್ಯದ ಬಗ್ಗೆ ಅಂಧಕಾರ ಮತ್ತು ಕೆಟ್ಟ ಅಭಿಪ್ರಾಯಗಳನ್ನು ನೀವು ಹೊಂದಿದ್ದೀರಿ' ಎಂದು ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶ ಗಾಂಜಾ ರಾಜ್ಯವಾಗಿದ್ದು, ನಮ್ಮ ಮನೆಯ ತುಳಸಿ ಬಗ್ಗೆ ಗೊತ್ತಿಲ್ಲವೆಂದು ಉದ್ಧವ್ ಠಾಕ್ರೆ ಟೀಕಿಸಿದ ನಂತರ ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸಿಎಂ ವಿರುದ್ಧ ಈ ರೀತಿ ಹರಿಹಾಯ್ದಿದ್ದಾರೆ.
ಇದರ ಜೊತೆಗೆ ಕೆಲವರು ಬ್ರೆಡ್ ಹಾಗೂ ಬೆಣ್ಣೆಗಾಗಿ ಮುಂಬೈಗೆ ಬರುತ್ತಾರೆ. ನಂತರ ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುವ ಮೂಲಕ ನಗರವನ್ನು ನಿಂದಿಸುತ್ತಾರೆ ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದರು.
ಇದಕ್ಕಾಗಿ ಅಸಮಾಧಾನಗೊಂಡ ಕಂಗನಾ ಮುಖ್ಯಮಂತ್ರಿ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಮತ್ತಷ್ಟು ಟ್ವೀಟ್ ಮಾಡಿರುವ ಅವರು ಹಿಮಾಲಯದ ಸೌಂದರ್ಯವು ಪ್ರತಿಯೊಬ್ಬ ಭಾರತೀಯನಿಗೂ ಹೇಗೆ ಸೇರಿದೆಯೋ ಹಾಗೆಯೇ ಮುಂಬೈ ನೀಡುವ ಅವಕಾಶಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸೇರಿವೆ. ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶ ಎರಡೂ ನನ್ನ ಮನೆಗಳಾಗಿದ್ದು, ನನ್ನ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುವ ಧೈರ್ಯ ತೋರಬೇಡಿ ಎಂದು ಕಂಗನಾ ಗುಡುಗಿದ್ದಾರೆ.