ಹೊಸದಿಲ್ಲಿ: ಜನ್ ಧನ್ ಖಾತೆಗಳಿಗೆ ಸರ್ಕಾರದಿಂದ ವರ್ಗಾಯಿಸಲಾದ ಹಣ ಸಂಪೂರ್ಣ ಸುರಕ್ಷಿತವಾಗಿದೆ. ತಕ್ಷಣ ಹಣ ಪಡೆಯದಿದ್ದರೆ ವಾಪಸ್ ಹೋಗುತ್ತದೆ ಎಂಬುದು ವದಂತಿ ಮಾತ್ರ. ಖಾತೆದಾರರು ತಮಗೆ ಬೇಕಾದಾಗ ಹಣ ಪಡೆದುಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಚಿಂತೆ ಬಿಡಿ .. ಜನ್ ಧನ್ ಖಾತೆಯಲ್ಲಿನ ಹಣ ವಾಪಸ್ ಹೋಗದು: ಕೇಂದ್ರದ ಅಭಯ - ಕಾರ್ಯದರ್ಶಿ
ಜನ್ ಧನ್ ಖಾತೆಗಳಿಗೆ ವರ್ಗಾಯಿಸಲಾದ ಹಣ ಖಾತೆಯಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಖಾತೆದಾರರು ತಮಗೆ ಬೇಕಾದಾಗ ಬ್ಯಾಂಕ್ನಿಂದ ಅಥವಾ ಎಟಿಎಂ ಮೂಲಕ ಹಣ ಪಡೆಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
"ಜನ್ ಧನ್ ಖಾತೆಗಳಿಗೆ ವರ್ಗಾಯಿಸಲಾದ ಹಣ ಖಾತೆಯಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಖಾತೆದಾರರು ತಮಗೆ ಬೇಕಾದಾಗ ಬ್ಯಾಂಕ್ನಿಂದ ಅಥವಾ ಎಟಿಎಂ ಮೂಲಕ ಹಣ ಪಡೆಯಬಹುದು. ಈ ಕುರಿತು ಹರಡಿರುವ ವದಂತಿಗಳಿಗೆ ನಾಗರಿಕರು ಕಿವಿಗೊಡಬೇಕಿಲ್ಲ" ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಕಳೆದ ರಾತ್ರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಮನೆ ಖರ್ಚು ನಡೆಸಲು ನೆರವಾಗುವ ನಿಟ್ಟಿನಲ್ಲಿ ದೇಶದ 20.5 ಕೋಟಿ ಮಹಿಳಾ ಜನ್ ಧನ್ ಖಾತೆಗಳಿಗೆ ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳು ತಲಾ 500 ರೂಪಾಯಿ ಜಮಾ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಘೋಷಿಸಿದ್ದರು. ಅದರಂತೆ ಮಹಿಳಾ ಜನ್ ಧನ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ. ಆದರೆ ಖಾತೆಯಲ್ಲಿನ ಹಣವನ್ನು ತಕ್ಷಣ ಪಡೆದುಕೊಳ್ಳದಿದ್ದರೆ ಹಣ ಸರ್ಕಾರಕ್ಕೆ ವಾಪಸ್ ಹೋಗಲಿದೆ ಎಂಬ ಸಂದೇಶ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.