ಕೋಲ್ಕತ್ತಾ:ನಿನ್ನೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳು ಒಲಿದು ಬರಲಿದೆ ಎಂಬ ವರದಿಯಿಂದ ವಿಪಕ್ಷಗಳು ಸಿಡಿಮಿಡಿಗೊಂಡಿವೆ.
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಾನು ಇಂತಹ ವರದಿಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳೆಂಬ ಗಾಸಿಪ್ಗಳನ್ನು ನಾನು ನಂಬುವುದಿಲ್ಲ. ಇಂತಹ ಗಾಸಿಪ್ಗಳ ಮೂಲಕ ಮತಯಂತ್ರಗಳನ್ನು ಬದಲು ಮಾಡುವ ಗೇಮ್ ಪ್ಲಾನ್ ಇದೆ ಎಂದಿದ್ದಾರೆ. ವಿಪಕ್ಷಗಳ ಒಕ್ಕೂಟಕ್ಕೆ ಕರೆ ನೀಡಿರುವ ಅವರು, ಎಲ್ಲ ಪ್ರತಿಪಕ್ಷಗಳು ಒಂದಾಗಿ ಬಲಗೊಳ್ಳಿ. ಈ ಯುದ್ಧದಲ್ಲಿ ಒಟ್ಟಾಗಿ ನಾವು ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಚುನಾವಣೋತ್ತರ ಸಮೀಕ್ಷೆಯನ್ನೂ ತಪ್ಪು ಎಂದು ಹೇಳಲಾಗದು. ಇದು ಟಿವಿಗಳನ್ನು ಸ್ವಿಚ್ ಆಫ್ ಮಾಡಿ, ಸೋಷಿಯಲ್ ಮೀಡಿಯಾಗಳ ಲಾಗ್ ಔಟ್ ಮಾಡಿ, 23ರ ಫಲಿತಾಂಶಕ್ಕಾಗಿ ಕಾಯಬೇಕಾದ ಸಮಯ ಎಂದು ಹೇಳಿದ್ದಾರೆ.