ನವದೆಹಲಿ:ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಬಗ್ಗೆ ಚರ್ಚಿಸಲು ಅವಕಾಶ ಕೋರಿ ವಿರೋಧ ಪಕ್ಷದ ಸಂಸದರು ಗೊಂದಲ ಸೃಷ್ಟಿಸಿದ ಕಾರಣ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರಾಜನಾಥ್ ಅವರ ಹೇಳಿಕೆ ಬಗ್ಗೆ ಚರ್ಚಿಸಲು ಅವಕಾಶ ಕೋರಿ ವಿರೋಧ ಪಕ್ಷದ ಸಂಸದರು ಗೊಂದಲ ಸೃಷ್ಟಿಸಿದಾಗ, ನಾಯ್ಡು ಸದಸ್ಯರ ಕೂಗಾಟವನ್ನು ನಿಲ್ಲಿಸಿದ್ದಲ್ಲದೇ, ರಾಜ್ಯಸಭೆಯಲ್ಲಿ ಹಾಕಿದ ನಿಯಮಗಳನ್ನು ಅನುಸರಿಸುವಂತೆ ತಿಳಿಸಿದರು.
ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಈ ವೇಳೆ ಮಾತನಾಡಿ, ವ್ಯವಸ್ಥೆಯನ್ನು ಒಬ್ಬರಾದರೂ ಅರ್ಥಮಾಡಿಕೊಳ್ಳಿ, ನನ್ನ ಸಮಸ್ಯೆ ಏನೆಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈಗ ನಡೆಯುತ್ತಿರುವ ಸಂಗತಿಗಳಿಂದ ನಾನು ತಂಬಾ ನೋವನ್ನನುಭವಿಸುತ್ತಿದ್ದೇನೆ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ. ಪ್ರದೇಶವನ್ನು ಅತಿಕ್ರಮಿಸಿದೆ. ಅಲ್ಲದೇ 1963 ರ ಚೀನಾ-ಪಾಕಿಸ್ತಾನ ನಡುವಿನ 'ಗಡಿ ಒಪ್ಪಂದ'ದಡಿ ಪಾಕಿಸ್ತಾನವು ಪಿಒಕೆ ಯಲ್ಲಿನ 5,180 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಾಗೆ ನೀಡಿದೆ. ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯ ಪೂರ್ವ ವಲಯದಲ್ಲಿನ 90,000 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದರು.