ನವದೆಹಲಿ :ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಪತ್ರ ಬರೆದಿದ್ದಾರೆ.
ಕಾಯ್ದೆಗಳ ಬಗ್ಗೆ ಕಾಂಗ್ರೆಸ್, ವಿಪಕ್ಷಗಳ ಬೂಟಾಟಿಕೆ ಮಾತುಗಳನ್ನು ನಂಬಬೇಡಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಮ್ಮ 8 ಪುಟಗಳ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ರೈತರ ಕ್ಷೇಮಕ್ಕಾಗಿ ಪ್ರಧಾನಿ ಮೋದಿ ಸರ್ಕಾರ ಬದ್ಧವಾಗಿದೆ. ಸಣ್ಣ, ಮಧ್ಯಮ ವರ್ಗದ ರೈತರ ಅನುಕೂಲಕ್ಕಾಗಿ ಹೊಸದಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಕನಿಷ್ಠ ಬೆಂಬಲ ಬೆಲ(ಎಂಎಸ್‌ಪಿ) ಮುಂದುವರಿಯಲಿದೆ.
ಪ್ರಸ್ತುತ ಇರುವ ಮಂಡಿ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅನ್ನದಾತರು ತಮ್ಮ ಭೂಮಿಯನ್ನು ಕಾರ್ಪೊರೇಟ್ ಸಂಸ್ಥೆಗಳು ನಿಯಂತ್ರಿಸಲು ಈ ಕಾಯಿದೆಯಲ್ಲಿ ಯಾವುದೇ ನಿಬಂಧನೆಗಳು ಇಲ್ಲ.
ಕೇಂದ್ರ ಸರ್ಕಾರದ ಈ ನೂತನ ಕಾಯ್ದೆಗಳನ್ನು ಅನೇಕ ರೈತರು ಒಪ್ಪಿಕೊಂಡಿದ್ದಾರೆ. ಆದರೆ, ಕೆಲವು ಸಂಘಟನೆಗಳು ಮಾತ್ರ ಸಮಸ್ಯೆ ಸೃಷ್ಟಿಸುತ್ತಿವೆ ಎಂದು ತೋಮರ್ ಪತ್ರದಲ್ಲಿ ಬರೆದಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ. ವಿಪಕ್ಷಗಳ ಪಿತೂರಿಯನ್ನು ಬಹಿರಂಗ ಮಾಡುತ್ತೇವೆ. ವಾಸ್ತವತೆಯನ್ನು ಬಹಿರಂಗ ಪಡೆಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬರೆದಿರುವ ಪತ್ರವನ್ನು ರೈತರ ಓದಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಆತ ಬರೆದಿರುವ ವಿನಯಪೂರ್ವಕವಾದ ಪತ್ರವನ್ನು ರೈತರು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.