ನವದೆಹಲಿ:ಕೇಂದ್ರದ ಮಾಜಿ ಹಣಕಾಸು ಸಚಿವ, ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಇಂದು ಮಧ್ಯಾಹ್ನ 12.30ಕ್ಕೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಗಣ್ಯಾತಿಗಣ್ಯರು ಅವರ ಅಂತಿಮ ದರ್ಶನ ಪಡೆದಿದ್ದು, ನಾಳೆ ಸಕಲ-ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್, ಯುಎಇ ಹಾಗೂ ಬಹ್ರೇನ್ ಪ್ರವಾಸದಲ್ಲಿದ್ದಾರೆ. ಜೇಟ್ಲಿ ಅವರ ನಿಧನದ ಸುದ್ದಿ ತಿಳಿದು ಪ್ರಧಾನಿ ಮೋದಿ ಜೇಟ್ಲಿ ಪತ್ನಿಯೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಅರುಣ್ ಜೇಟ್ಲಿ ಪತ್ನಿ ಸಂಗೀತಾ ಹಾಗೂ ಮಗ ರೋಹನ್, ಯಾವುದೇ ಕಾರಣಕ್ಕೂ ವಿದೇಶ ಪ್ರವಾಸ ಮೊಟಕುಗೊಳಿಸಿ ವಾಪಸ್ ಬರಬೇಡಿ ಎಂದು ಪ್ರಧಾನಿ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ.