ಮುಂಬೈ (ಮಹಾರಾಷ್ಟ್ರ):ಕೊರೊನಾದಿಂದಾಗಿ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಹೊಸ ಸಾಮಾಜಿಕ ಮತ್ತು ಮಾನಸಿಕ ಸವಾಲು ಮುನ್ನೆಲೆಗೆ ಬಂದಿದೆ. ಈ ಮಾರಕ ಮತ್ತು ಸಾಂಕ್ರಾಮಿಕ ವೈರಸ್‌ನ ಅರಿವಿನ ಕೊರತೆ ಮತ್ತು ಸಹಜ ಭಯದಿಂದಾಗಿ ಸಂಬಂಧಿಕರು ಮತ್ತು ನೆರೆಹೊರೆಯವರು ಕೊರೊನಾದಿಂದ ಮರಣ ಹೊಂದಿದ ರೋಗಿಗಳ ಕೊನೆಯ ವಿಧಿ ವಿಧಾನಗಳನ್ನು ನಿರ್ವಹಿಸಲು ನಿರಾಕರಿಸುತ್ತಿರುವ ನಿದರ್ಶನಗಳು ಬೆಳಕಿಗೆ ಬರ್ತಿವೆ.
ಮಹಾರಾಷ್ಟ್ರದಲ್ಲಿ ಕೊರೊನಾಗೆ ಹೆಚ್ಚಿನ ಜನ ಬಲಿಯಾದ್ದರಿಂದ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಈ ಹಿನ್ನೆಲೆ ಇಲ್ಲಿನ ವೈದ್ಯರು ಈ ಬಗ್ಗೆ ಸುರಕ್ಷತಾ ನಿಯಮಗಳನ್ನು ರೂಪಿಸಲು ಹಾಗೂ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕೋವಿಡ್ -19 ಉಸಿರಾಟದ ಕಾಯಿಲೆಯಾಗಿದೆ. ಸೀನುವಿಕೆ, ಕೆಮ್ಮು ಇತ್ಯಾದಿಗಳ ಮೂಲಕ ವೈರಸ್ ಹರಡುತ್ತದೆಯೇ ಹೊರತು ರೋಗಿಯು ಸತ್ತಾಗ ಈ ವೈರಸ್ ಹರಡುವುದಿಲ್ಲ ಎಂದು ಮಹಾರಾಷ್ಟ್ರ ಮೂಲದ ಐವರು ವೈದ್ಯರ ಗುಂಪು ಹೇಳಿದೆ. ಇನ್ನು ದೇಹದ ಮೇಲ್ಮೈ ಮತ್ತು ಅದರ ಸ್ರವಿಸುವಿಕೆಯಲ್ಲಿರುವ ವೈರಸ್‌ಗಳಿಂದ ಕಾಪಾಡಿಕೊಳ್ಳುವ ಸಲುವಾಗಿ ಸುರಕ್ಷತಾ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಪ್ರಯಾಸ್ ಹೆಲ್ತ್ ಗ್ರೂಪ್‌ನ ಡಾ.ವಿನಯ್ ಕುಲಕರ್ಣಿ ಮತ್ತು ಡಾ.ಅನಂತ್ ಫಡ್ಕೆ, ಡಾ.ಅರುಣ್ ಗದ್ರೆ, ಡಾ.ಶಾರದಾ ಬಾಪತ್ ಮತ್ತು ಪೂನಾ ಸಿಟಿಜನ್ ಡಾಕ್ಟರ್ ಫೋರಂನ ಡಾ.ಶ್ರೀರಾಮ್ ಗೀತ್ ಈ ವೈದ್ಯರ ಗುಂಪು ಈ ಸಂಬಂಧ ಕೆಲ ರೂಪುರೇಷೆಗಳನ್ನು ಸಿದ್ಧಪಡಿಸಿದೆ.
ಈ ವೈರಸ್ಗಳು ವಾಯುಗಾಮಿ ಅಲ್ಲ ಮತ್ತು ಅವುಗಳು ಸ್ವಂತವಾಗಿ ಹರಡಲು ಸಾಧ್ಯವಿಲ್ಲ ಎಂದು ಹೇಳಿರುವ ಈ ವೈದ್ಯರು, ಮೃತ ವ್ಯಕ್ತಿಯ ದೇಹ ಮತ್ತು ಬಾಯಿಯನ್ನು ಗ್ಲೌಸ್ ಹಾಕಿಕೊಳ್ಳದೆ ಮುಟ್ಟಬಾರದು ಎಂದು ಎಚ್ಚರಿಸಿದ್ದಾರೆ.
ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ ಆಸ್ಪತ್ರೆಯ ಸಿಬ್ಬಂದಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆರೋಗ್ಯ ಸಚಿವಾಲಯ ಏನು ಹೇಳುತ್ತದೆ?:
ಮೂಗು ಮತ್ತು ಬಾಯಿಯಲ್ಲಿ ಸೇರಿಸಲಾದ ಕೊಳವೆಗಳನ್ನು ಸಿಬ್ಬಂದಿ 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಲ್ಲಿ (ಬ್ಲೀಚಿಂಗ್ ದ್ರಾವಣ) ಮುಳುಗಿಸಿದ ನಂತರ ವಿಲೇವಾರಿ ಮಾಡಬೇಕು.
ಮೃತ ದೇಹದಲ್ಲಿನ ಮೂಗು, ಬಾಯಿ ಅಥವಾ ತೆರೆದ ಗಾಯಗಳ ಮೂಲಕ ಯಾವುದೇ ಸ್ರವಿಸುವಿಕೆಯನ್ನು ಒರೆಸುವಾಗ ಆಸ್ಪತ್ರೆಯ ಸಿಬ್ಬಂದಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿದಾಗ ಚೀಲವನ್ನು ಬ್ಲೀಚಿಂಗ್ ದ್ರಾವಣದಿಂದ ಒರೆಸಬೇಕು ಮತ್ತು ಅದರ ಮೇಲೆ ಎರಡನೇ ಹೊದಿಕೆಯನ್ನು ಹಾಕಬೇಕು. ಇದಾದ ನಂತರ ಬ್ಲೀಚಿಂಗ್ ದ್ರಾವಣದೊಂದಿಗೆ ಮೃತ ವ್ಯಕ್ತಿಯನ್ನು ಇಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸಬೇಕು.