ಅಮರಾವತಿ (ಆಂಧ್ರಪ್ರದೇಶ): ಮೊದಲೇ ಕೊರೊನಾ.. ಮುಂಜಾಗೃತೆಗಾಗಿ ರಕ್ಷಣಾ ಪರಿಕರಗಳು ಬೇಕ ಎಂದಿದ್ದಾರೆ ಒಬ್ಬ ವೈದ್ಯರು. ಎನ್-95 ಮಾಸ್ಕ್‌ಗಳನ್ನು ಯಾಕೆ ಕೊಡುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ ಪರಿಣಾಮ ಈತನ ಜೀವನ ದುರಂತಕ್ಕೆ ತಳ್ಳಲ್ಪಟ್ಟಿದೆ. ರಸ್ತೆಯಲ್ಲಿ ಅರೆನಗ್ನನಾಗಿ ಅಲೆಯುವಂತಾಗಿದೆ. ಕೊನೆಗೆ ಈತನಿಗೆ ಮಾಸಿಕ ಸ್ಥಿತಿ ಸರಿಯಿಲ್ಲ ಎಂದು ಮುದ್ರೆ ಒತ್ತಲಾಗಿದೆ. ಇಷ್ಟಕ್ಕೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ವೈದ್ಯ ಸುಧಾಕರ್ ಜೀವನದಲ್ಲಿ ನಡೆದಿರುವ ಆ ವಿಷಾದಕರ ಘಟನೆಗಳು ಏನು..?
ಮಾಸ್ಕ್ ಕೇಳಿದ್ದು ತಪ್ಪು ಎಂದ್ರು!
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ನರ್ಸಿಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಸುಧಾಕರ್, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಎನ್-95 ಮಾಸ್ಕ್ ಗಳು ಕೊಡುತ್ತಿಲ್ಲ ಎಂದು ಸರ್ಕಾರವನ್ನು ಟೀಕಿಸಿ, ಅನುಭವ ಇಲ್ಲದ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದಿದ್ದಾರೆ. ಜನಪ್ರತಿನಿಧಿಗಳು ಸಹಿತ ಆಸ್ಪತ್ರೆಗಳತ್ತ ಯಾರೂ ಗಮನ ಹರಿಸುತ್ತಿಲ್ಲ ಎಂದು ವಿಮರ್ಶಿಸಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಪರಿಣಾಮವಾಗಿ 2020ರ ಏಪ್ರಿಲ್ 8 ರಂದು ವೈದ್ಯ ಸುಧಾಕರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿತ್ತು. ಅಂದಿನಿಂದ ಡಾಕ್ಟರ್ ಸುಧಾಕರ್‌ಗೆ ಇನ್ನಿಲ್ಲದ ಕಷ್ಟಗಳು ಆರಂಭವಾಗಿವೆ.
ವಿಶಾಖಪಟ್ಟಣದಲ್ಲಿ ಬಂಧನ
2020ರ ಮೇ 16 ರಂದು ವಿಶಾಖಪಟ್ಟಣದ ಪೋರ್ಟ್ ಎಂಬ ಆಸ್ಪತ್ರೆ ಬಳಿ ಅರೆನಗ್ನನಾಗಿ ವೈದ್ಯ ಸುಧಾಕರ್ ಪ್ರತಿಭಟನೆ ಮಾಡಿದ್ದರು. ಗಲಾಟೆ ಮಾಡುತ್ತಿದ್ದಾರೆ ಎಂದು ಅಲ್ಲಿದ್ದವರು ದೂರು ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ಹಗ್ಗದಲ್ಲಿ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿದಾಗ, ಸುಧಾಕರ್‌ಗೆ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಪರಿಣಾಮ ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೆಕ್ಷನ್ 353, 427ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಬಂಧನದ ವೇಳೆ ವೈದ್ಯನ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿದ್ದ ವಿಡಿಯೋವೊಂದು ಬಹಿರಂಗವಾಗಿತ್ತು. ಮದ್ಯದ ಮತ್ತಿನಲ್ಲಿ ವೈದ್ಯ ಅವಾಂತರ ಸೃಷ್ಟಿಸಿದ್ದಾನೆ ಎಂದು ವಿಶಾಖಪಟ್ಟಣ ಪೊಲೀಸ್ ಕಮಿಷನರ್ ಆರ್.ಕೆ. ಮೀನಾ ಹೇಳಿಕೆ ನೀಡಿದ್ದಾರೆ. ಇನ್ನು, ವೈದ್ಯನ ಮೇಲೆ ಹಲ್ಲೆ ಮಾಡಿದ ಪೇದೆಯನ್ನು ಅಂದೇ ಅಮಾನತು ಮಾಡಲಾಗಿದೆ.
ನನ್ನ ಪುತ್ರನಿಗೆ ಪ್ರಾಣ ಬೆದರಿಕೆ
ಸುಧಾಕರ್ ತಾಯಿ ವಿಶಾಖಪಟ್ಟಣದ ಪೊಲೀಸ್ ಕಮಿಷನರ್ ಆರ್.ಕೆ.ಮೀನಾ ಅವರನ್ನು ಭೇಟಿ, ತನ್ನ ಪುತ್ರನಿಗೆ ಪ್ರಾಣಬೆದರಿಕೆ ಇದೆ ಎಂದು ದೂರಿದ್ದಾರೆ. ಕೋರ್ಟ್‌ಗೆ ಹಾಜರು ಪಡಿಸುವಾಗ ನನ್ನ ಮಗನಿಗೆ ಏನಾದ್ರೂ ಆಗಬಹುದು ಅಂತ ಕಣ್ಣೀರಿಟ್ಟಿದ್ದಾರೆ. ಪುತ್ರನನ್ನು ಕೋರ್ಟ್‌ಗೆ ಕರೆದೊಯ್ಯುವಾಗ ತಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಮಿಷನರ್ ಬಳಿ ಮನವಿ ಮಾಡಿದ್ದಾರೆ.